ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗದಲ್ಲಿರುವ ಚಿಕ್ಕಜಾಲ ಮತ್ತು ದೊಡ್ಡಜಾಲ ಕೆರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡಗಳ ನಿರ್ಮಿಸಿರುವ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ಚಿಕ್ಕಜಾಲ ನಿವಾಸಿಗಳಾದ ಸಿ.ಎನ್.ರಾಮಕೃಷ್ಣ ಮತ್ತು ಹೆಚ್.ಕೃಷ್ಣಪ್ಪ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್: ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ನ.23ಕ್ಕೆ ನಿಗದಿ
ಅಲ್ಲದೇ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಯಲಹಂಕ ತಹಶೀಲ್ದಾರ್, ಯಲಹಂಕ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಿಕ್ಕಜಾಲ ಗ್ರಾಮ ಪಂಚಾಯತ್ ಮತ್ತು ಒತ್ತುವರಿದಾರರಾದ ಕ್ಲೀನ್ ಸಿಟಿ ಡೆವಲ್ಪರ್ ಪ್ರೈವೇಟ್ ಲಿಮಿಟೆಡ್ ಮತ್ತು ಲಕ್ಷ್ಮೀ ಎಂಟರ್ ಪ್ರೈಸಸ್‌ಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ, ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲರ ವಾದವೇನು?: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ದೊಡ್ಡಜಾಲ ಮತ್ತು ಚಿಕ್ಕಜಾಲ ಕೆರೆಗಳ ಬಫರ್ ಜೋನ್‌ನಲ್ಲಿ ಒತ್ತುವರಿ ಮಾಡಿ ಕ್ಲೀನ್ ಸಿಟಿ ಡೆವಲ್ಪರ್ ಪ್ರೈವೇಟ್ ಲಿಮಿಟೆಡ್ ಮತ್ತು ಲಕ್ಷ್ಮೀ ಎಂಟರ್ಪ್ರೈಸಸ್ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡಬೇಕು. ದೊಡ್ಡಜಾಲ ಮತ್ತು ಚಿಕ್ಕಜಾಲ ಕೆರೆಗಳನ್ನು ಸರ್ವೇ ನಡೆಸಿ, ಒತ್ತುವರಿಗಳನ್ನು ನಿಗದಿತ ಸಮಯದಲ್ಲಿ ತೆರವು ಮಾಡುವಂತೆ ನಿರ್ದೇಶನ ನೀಡಬೇಕು'' ಎಂದು ಕೋರಿದರು.
ವಾದ ಆಲಿಸಿದ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಶಾಲಾ ಪ್ರವೇಶದಲ್ಲಿ ಅವಕಾಶ ನೀಡುವುದು ಒಂದು ಸ್ಥಾಪಿತ ಹಕ್ಕು ಎಂದು ಪರಿಗಣಿಸಲಾಗದು: ಹೈಕೋರ್ಟ್