ಮುಂಬೈ: ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಾಗಿ ರಶ್ಮಿ ಶುಕ್ಲಾ ಮರು ನೇಮಕಗೊಂಡಿದ್ದಾರೆ. ಮರಳಿ ಅಧಿಕಾರ ವಹಿಸಿಕೊಂಡ ಶುಕ್ಲಾ ಮಂಗಳವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರ ಸಮ್ಮುಖದಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯ ಹುತಾತ್ಮರಿಗೆ ಗೌರವ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸಿದ್ದರು.
1998ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರನ್ನು ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯಿಂದ ಚುನಾವಣಾ ಆಯೋಗ (ಇಸಿಐ)ವು ನವೆಂಬರ್ 4ರಂದು ತೆಗೆದು ಹಾಕಿತ್ತು. ಚುನಾವಣಾ ಆಯೋಗದ ಅನುಮೋದನೆಯ ನಂತರ ರಾಜ್ಯ ಸರ್ಕಾರವು 1990 ರ ಬ್ಯಾಚ್‌ನ ಐಪಿಎಸ್ ಸಂಜೀವ್ ಕುಮಾರ್ ವರ್ಮಾ ಅವರನ್ನು ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಿಸಿತ್ತು. ವೀರ್ ಅವರು ಕಾನೂನು ಮತ್ತು ತಾಂತ್ರಿಕ ವಿಭಾಗದ ಮಹಾನಿರ್ದೇಶಕರಾಗಿದ್ದರು. ಅವರು ಏಪ್ರಿಲ್ 2028 ರಲ್ಲಿ ನಿವೃತ್ತರಾಗಲಿದ್ದಾರೆ.
ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಾಗಿ ಶುಕ್ಲಾ ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಒತ್ತಾಯಿಸಿದ ನಂತರ ಆಯೋಗವು ಶುಕ್ಲಾ ಅವರನ್ನು ತೆಗೆದು ಹಾಕಿತ್ತು.
"ಚುನಾವಣೆ ನಡೆಯುತ್ತಿರುವ ಜಾರ್ಖಂಡ್ನಲ್ಲಿನ ಡಿಜಿಪಿಯನ್ನು ಚುನಾವಣಾ ಆಯೋಗ ಬದಲಿಸಬಹುದಾದರೆ, ಅದನ್ನೇ ಮಹಾರಾಷ್ಟ್ರದಲ್ಲಿ ಏಕೆ ಆಯೋಗ ಮಾಡುತ್ತಿಲ್ಲ" ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಹುದ್ದೆಯಿಂದ ರಶ್ಮಿ ಶುಕ್ಲಾ ಅವರನ್ನು ತಕ್ಷಣ ತೆಗೆದುಹಾಕಬೇಕೆಂದು ಕಳೆದ ವಾರ ಕೂಡ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ನಾನಾ ಪಟೋಲೆ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ಒತ್ತಾಯಿಸಿದ್ದರು.
ಶುಕ್ಲಾ ಅವರು ಬಿಜೆಪಿಯ ಪರವಾಗಿದ್ದು, ಅವರು ಅಧಿಕಾರದಲ್ಲಿದ್ದರೆ ಚುನಾವಣೆಗಳು ನ್ಯಾಯಯುತ ಮತ್ತು ಪಾರದರ್ಶಕವಾಗಿ ನಡೆಯಲು ಸಾಧ್ಯವಿಲ್ಲ ಎಂದು ಪಟೋಲೆ ಹೇಳಿದ್ದರು. ಶುಕ್ಲಾ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಚುನಾವಣಾ ಆಯೋಗ ಅದನ್ನು ನಿರ್ಲಕ್ಷಿಸಿದೆ ಎಂದು ಪಟೋಲೆ ಆರೋಪಿಸಿದ್ದರು.
ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಶುಕ್ಲಾ ಅವರನ್ನು ತೆಗೆದುಹಾಕಿದ ಕ್ರಮವು ಚುನಾವಣೆ ಮುಕ್ತಾಯದವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಹೈಕೋರ್ಟ್ ನಿರಾಕರಿಸಿತ್ತು. ಸದ್ಯ ರಶ್ಮಿ ಶುಕ್ಲಾ ಅವರನ್ನು ಮಹಾರಾಷ್ಟ್ರದ ಡಿಜಿಪಿಯಾಗಿ ಮರುನೇಮಕ ಮಾಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಒಪ್ಪಿಗೆ ಸೂಚಿಸಿದ ನಂತರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ : ಸಂಭಾಲ್ನಲ್ಲಿ ಜನಜೀವನ ಸಹಜ ಸ್ಥಿತಿಗೆ: ಶಾಲೆ ಪುನಾರಂಭ, ಇಂಟರ್ನೆಟ್ ಈಗಲೂ ಬಂದ್