ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿರುವ ಪೊಲೀಸರು ಮತ್ತೊಂದು ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಡಿಜಿಟಿಲ್ ಸಾಕ್ಷ್ಯಾಧಾರಗಳು, ಎಫ್‌ಎಸ್‌ಎಲ್ ಹಾಗೂ ಸಿಎಫ್‌ಎಸ್‌ಎಲ್ ವರದಿಗಳು, ಮೊಬೈಲ್ ಕರೆಗಳ ವಿವರ ಹಾಗೂ ಸಾಕ್ಷಿಗಳ ಹೇಳಿಕೆಯನ್ನೊಳಗೊಂಡ ಮಾಹಿತಿ ಸೇರಿ ಆರೋಪಿಗಳಿಗೆ ಹಣ ವರ್ಗಾವಣೆಯಾದ ವಿವರವನ್ನು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಆರೋಪಿಗಳಾದ ಜಗದೀಶ್ ಮೊಬೈಲ್‌ನಲ್ಲಿ 4 ಫೋಟೋ, ಅನುಕುಮಾರ್ ಮತ್ತು ಚಾಲಕ ರವಿ ಮೊಬೈಲ್‌ನಲ್ಲಿ ತಲಾ 2 ಫೋಟೋಗಳನ್ನು ರಿಟ್ರೀವ್ ಮಾಡಲಾಗಿದ್ದು, ಆ ಕುರಿತು ಸಹ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ.
ಅಲ್ಲದೇ, ಆರೋಪಿಗಳ ಹಣಕಾಸಿನ ವ್ಯವಹಾರದ ಕುರಿತು ಸಹ ಮಾಹಿತಿ ಸಂಗ್ರಹಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದು, ಎಲ್ಲಾ ಆರೋಪಿಗಳ ಬ್ಯಾಂಕ್ ಖಾತೆ ಹಾಗೂ ಕೆವೈಸಿ ದಾಖಲೆಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹತ್ಯೆ ನಡೆದ ಹಿಂದೆ ಅಥವಾ ನಂತರದ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿದೆಯೇ ಎನ್ನುವ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಜಾಮೀನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಬಳಿಕ ದರ್ಶನ್ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಸದ್ಯ ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿಯನ್ನು ಅವರ ಪರ ವಕೀಲರು ಈಗಾಗಲೇ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಮಧ್ಯೆ ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಹಾಗೆಯೇ, ಈ ಮಧ್ಯೆ ಪ್ರಕರಣ ಸಂಬಂಧ ಪ್ರಮುಖ ಮಾಹಿತಿಯುಳ್ಳ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಜೊತೆಗೆ, ಇಂದು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ಮಂಡ್ಯದಿಂದಲೇ ನನ್ನ ರಾಜಕಾರಣ ಪುನರಾರಂಭ: ನನ್ನ ಉಸಿರಿರೋವರೆಗೂ ದರ್ಶನ್ ನನ್ನ ಮಗ: ಸುಮಲತಾ ಅಂಬರೀಶ್