ಬೆಂಗಳೂರು: ಸಂವಿಧಾನ ನೀಡಿರುವ ಹಕ್ಕುಗಳನ್ನು ಚಲಾಯಿಸುವ ಜೊತೆಗೆ, ಬಾಧ್ಯತೆಗಳನ್ನು ತಪ್ಪದೇ ಪಾಲಿಸುವುದೂ ಅವಶ್ಯಕ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಸಂವಿಧಾನ ದಿನ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾರತದ ಸಂವಿಧಾನ ಅಂಗೀಕರಣವಾದ ದಿನವನ್ನು ಸಂವಿಧಾನ ದಿನವೆಂದು ಆಚರಿಸುತ್ತೇವೆ. ಈ ಬಾರಿ 75ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ. ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳು ಸಂವಿಧಾನದಂತೆ ನಡೆದು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆದ್ದರಿಂದ ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದಿ, ಅದರ ಆಶಯಗಳನ್ನು ವಿದ್ಯಾರ್ಥಿಗಳು ಮನನ ಮಾಡಿಕೊಳ್ಳಬೇಕೆಂಬುದು ನಮ್ಮ ಉದ್ದೇಶ ಎಂದರು.
ಸರ್ಕಾರ ಸಂವಿಧಾನ ರಕ್ಷಿಸುವ ಕಾರ್ಯ ಮಾಡುತ್ತಿದೆ: ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಬಂಧ ಪ್ರತಿಕ್ರಿಯಿಸುತ್ತಾ, ಸಂವಿಧಾನಕ್ಕೆ ವಿರೋಧವಾಗಿರುವವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇತ್ತೀಚೆಗೆ ಉಡುಪಿಯ ಪೇಜಾವರ ಶ್ರೀಗಳೂ ಸಹ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ಸಂವಿಧಾನದಲ್ಲಿ ಈಗಾಗಲೇ 106 ತಿದ್ದುಪಡಿಗಳಾಗಿದ್ದು, ವಿಶ್ವದಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವುದು ಭಾರತದ ಸಂವಿಧಾನ ಎಂಬ ಹೆಮ್ಮೆ ನಮ್ಮದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 75ನೇ ವರ್ಷದ ಸಂವಿಧಾನ ಅಂಗೀಕರಣ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಬೇಕು. ನಾನು ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ ಎಂದರು.
ವಿಶ್ವದಲ್ಲಿ ಅತೀ ದೀರ್ಘಕಾಲ ಜಾರಿಯಲ್ಲಿರುವ ಸಂವಿಧಾನ ನಮ್ಮದಾಗಿದೆ. ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನು ನಾವ್ಯಾರೂ ಮರೆಯಬಾರದು. ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾ ಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ ಆರ್ಎಸ್ಎಸ್ ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಾಲ್ನಡಿಗೆ ಜಾಥಾಗೆ ಚಾಲನೆ: ಸಂವಿಧಾನ ಅಂಗೀಕರಣದ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಧಾನಸೌಧದ ಎದುರು ಆಯೋಜಿಸಿದ್ದ ಕಾಲ್ನಡಿಗೆ ಜಾಥಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಇದಕ್ಕೂ ಮೊದಲು ವಿಧಾನಸೌಧದ ಎದುರಿಗೆ ಇರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ವಂದಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.