ಬೀಜಿಂಗ್: ತೈವಾನ್ ದ್ವೀಪರಾಷ್ಟ್ರವನ್ನು ಸುತ್ತುವರೆದಿರುವ ಚೀನಾ ಬೃಹತ್ ಪ್ರಮಾಣದ ಲೈವ್ ಫೈರ್ ಮಿಲಿಟರಿ ಡ್ರಿಲ್ (ಮಿಲಿಟರಿ ಅಭ್ಯಾಸ) ನಡೆಸುತ್ತಿದೆ. ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ಗೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ ಚೀನಾ ಈ ಮಿಲಿಟರಿ ಡ್ರಿಲ್ ನಡೆಸುತ್ತಿದೆ. ಭಾನುವಾರದವರೆಗೆ ಡ್ರಿಲ್ ನಡೆಯಲಿದ್ದು, ಈ ಅವಧಿಯಲ್ಲಿ ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ಸುಳಿದಾಡದಂತೆ ಇತರ ರಾಷ್ಟ್ರಗಳಿಗೆ ಚೀನಾ ಎಚ್ಚರಿಕೆ ರವಾನಿಸಿದೆ.
ಇತರ ರಾಷ್ಟ್ರಗಳನ್ನು ಕೆಣಕಿದ ಚೀನಾ: ತೈವಾನ್ಗೆ ಪ್ರವೇಶ ನೀಡುವ ಎಲ್ಲ ಮಾರ್ಗಗಳನ್ನು ಬಂದ್ ಮಾಡುವ ಮತ್ತು ಆ ದೇಶವನ್ನು ಚೀನಾದೊಂದಿಗೆ ವಿಲೀನ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಈ ಡ್ರಿಲ್ಗಳು ಪೂರ್ವಾಭ್ಯಾಸವಾಗಿರಬಹುದು ಎನ್ನಲಾಗ್ತಿದೆ. ಒಂದು ವೇಳೆ ಚೀನಾ ಇಂಥದೊಂದು ಕ್ರಮಕ್ಕೆ ಮುಂದಾದಲ್ಲಿ, ತೈವಾನ್ನ ಪ್ರಮುಖ ಬೆಂಬಲಿಗನಾಗಿರುವ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾ ಈ ಹೋರಾಟದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಲಿದೆ.
ಅತಿ ದೊಡ್ಡ ಸೈನ್ಯ: 20 ಲಕ್ಷ ಯೋಧರನ್ನು ಹೊಂದಿರುವ ಚೀನಾ ಮಿಲಿಟರಿ ವಿಶ್ವದಲ್ಲೇ ಅತಿದೊಡ್ಡ ಸೈನ್ಯವಾಗಿದ್ದು, ಅಮೆರಿಕಕ್ಕಿಂತ ಹೆಚ್ಚು ಯುದ್ಧನೌಕೆಗಳನ್ನು ಹೊಂದಿದೆ. ಚೀನಾ ಮಿಲಿಟರಿ ಮುಂದೆ ತೈವಾನ್ ಒಂದು ಚಿಕ್ಕ ಪ್ರತಿರೋಧವನ್ನೂ ನೀಡಲು ಸಾಧ್ಯವಿಲ್ಲ. ಆದಾಗ್ಯೂ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ತೈವಾನ್ ತನ್ನೆಲ್ಲ ಶಕ್ತಿಯೊಂದಿಗೆ ಚೀನಾ ವಿರುದ್ಧ ಸೆಟೆದು ನಿಲ್ಲುವುದಾಗಿ ಎಂದು ಹೇಳಿಕೊಂಡಿದೆ.
ಯುದ್ಧದ ಸನ್ನಿವೇಶ: ತೈವಾನ್ ಸುತ್ತಲೂ ಆರು ವಲಯಗಳಲ್ಲಿ ಯುದ್ಧ ವಿಮಾನಗಳು, ನೌಕೆಗಳು ಮತ್ತು ಕ್ಷಿಪಣಿಗಳೊಂದಿಗೆ ಮಿಲಿಟರಿ ಡ್ರಿಲ್ ಆರಂಭಿಸಿರುವುದಾಗಿ ಚೀನಾ ಹೇಳಿದೆ. ತೈವಾನ್ ಗಡಿಯಿಂದ ತೀರಾ ಹತ್ತಿರ 20 ಕಿ.ಮೀ. ದೂರದಲ್ಲಿ ಮಿಲಿಟರಿ ಅಭ್ಯಾಸ ನಡೆಯುತ್ತಿದೆ. ಪೆಲೋಸಿ ಅವರು ತೈವಾನ್ ಭೇಟಿಗೆ ಬರಲು ಅವಕಾಶ ನೀಡಿದ್ದಕ್ಕಾಗಿ, ಇದು ತೈವಾನ್ಗೆ ನೀಡಲಾಗುತ್ತಿರುವ ಶಿಕ್ಷೆ ಎಂದು ಚೀನಾ ಹೇಳಿದೆ.
ನಿಜವಾಗಿಯೂ ಯುದ್ಧ ನಡೆದಾಗ ಹೇಗಿರುತ್ತದೋ ಅದೇ ಮಾದರಿಯಲ್ಲಿ ಮಿಲಿಟರಿ ಡ್ರಿಲ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಚೀನಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. 1995 ಮತ್ತು 1996 ರಲ್ಲಿ ಆಗಿನ ತೈವಾನ್ ಅಧ್ಯಕ್ಷ ಲೀ ಟೆಂಗ್-ಹುಯಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಮುದ್ರದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಕ್ಷಿಪಣಿಗಳನ್ನು ಚೀನಾ ಉಡಾಯಿಸಿತ್ತು. ಅದರ ನಂತರ ತೈವಾನ್ ವಿರುದ್ಧ ಚೀನಾ ನಡೆಸಿರುವ ಅತಿದೊಡ್ಡ ಮಿಲಿಟರಿ ಡ್ರಿಲ್ ಇದಾಗಿದೆ.
ತೈವಾನ್ ವಿಲೀನಕ್ಕೆ ಚೀನಾ ಪಟ್ಟು: ತೈವಾನ್ ಅನ್ನು ಬಲವಂತವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬುದು ಚೀನಾ ಉದ್ದೇಶವಾಗಿದೆ. ತೈವಾನ್ ಬೆಂಬಲಕ್ಕಿರುವ ವಾಷಿಂಗ್ಟನ್ ಸೇರಿದಂತೆ ಇತರ ಯಾವುದೇ ರಾಷ್ಟ್ರವನ್ನಾದರೂ ಎದುರು ಹಾಕಿಕೊಳ್ಳಲು ಚೀನಾ ಸಿದ್ಧವಾಗಿದೆ. ಸದ್ಯ ಚೀನಾ ಅಧ್ಯಕ್ಷ ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿರುವ ಕ್ಸಿ ಜಿನ್ಪಿಂಗ್, ಮೂರನೇ ಬಾರಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗುವ ಸಿದ್ಧತೆಯಲ್ಲಿರುವಾಗಲೇ ಅಮೆರಿಕದ ಪ್ರತಿನಿಧಿಯೊಬ್ಬರು ತೈವಾನ್ಗೆ ಭೇಟಿ ನೀಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೋವಿಡ್ ಸಂದರ್ಭವನ್ನು ಸೂಕ್ತವಾಗಿ ನಿರ್ವಹಣೆ ಮಾಡದ್ದಕ್ಕೆ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಣೆಗೆ ಮುಂದಾಗದಿರುವುದಕ್ಕೆ ಕ್ಸಿ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಆದಾಗ್ಯೂ ಆವರು ತಮ್ಮ ಉತ್ತರಾಧಿಕಾರಿಯನ್ನು ಘೋಷಣೆ ಮಾಡಿಲ್ಲ. ಅಷ್ಟೇ ಅಲ್ಲದೆ ಚೀನಾ ಸರ್ಕಾರದ ಬಹುತೇಕ ಅಧಿಕಾರವನ್ನು ತಮ್ಮ ಮುಷ್ಟಿಯಲ್ಲೇ ಇಟ್ಟುಕೊಂಡಿದ್ದಾರೆ.
ತೈವಾನ್ ದ್ವೀಪವು ಚೀನಾದ ಒಂದು ಭಾಗವಾಗಿದೆ ಮತ್ತು ತೈವಾನ್ನ ಕಾನೂನುಬದ್ಧ ಸರ್ಕಾರ ಬೀಜಿಂಗ್‌ನಲ್ಲಿದೆ ಎಂಬ ತನ್ನ ವಾದವನ್ನು ತೈವಾನ್ ಒಪ್ಪಿಕೊಳ್ಳಬೇಕೆಂದು ಚೀನಾ ಬಯಸುತ್ತದೆ.
ಚೀನಾದ ಮಿಲಿಟರಿ ಬೆದರಿಕೆಗಳು ಮತ್ತು ತೈವಾನ್ ಅನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸುವ ಚೀನಾದ ಪ್ರಯತ್ನಗಳ ಮಧ್ಯೆ, ತೈವಾನ್ ನಿವಾಸಿಗಳು ಸ್ವಾತಂತ್ರ್ಯದ ಯಥಾಸ್ಥಿತಿಯನ್ನು ಅಗಾಧವಾಗಿ ಬೆಂಬಲಿಸುತ್ತಾರೆ. ಹಾಂಗ್ ಕಾಂಗ್ನಲ್ಲಿ ಚೀನಾ ನಡೆದುಕೊಂಡಿದ್ದನ್ನು ನೋಡಿದ ನಂತರ ತೈವಾನ್ ಜನತೆ ಚೀನಾ ವಿರುದ್ಧ ಮತ್ತಷ್ಟು ವ್ಯಗ್ರರಾಗಿದ್ದಾರೆ.