ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನ್ಯವು ಬಿಟ್ಟುಹೋದ ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕರು ತನ್ನ ವಿರುದ್ಧ ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಅಫ್ಘಾನಿಸ್ತಾನದಿಂದ ಕಾಲ್ತೆಗೆಯುವ ಸಮಯದಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೋಗಿಲ್ಲ ಎಂದು ಅಮೆರಿಕ ಹೇಳಿದ ಒಂದು ದಿನದ ನಂತರ ಪಾಕಿಸ್ತಾನ ಈ ಆರೋಪ ಮಾಡಿದ್ದು ಗಮನಾರ್ಹ.
ಈ ಬಗ್ಗೆ ಬುಧವಾರ ಮಾತನಾಡಿರುವ ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್-ಉಲ್-ಹಕ್ ಕಾಕರ್, ಭಯೋತ್ಪಾದಕರು ತಮ್ಮ ದೇಶದ ವಿರುದ್ಧ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ಈ ಪ್ರದೇಶದಾದ್ಯಂತ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿಯೂ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಒತ್ತಿ ಹೇಳಿದ ಕಾಕರ್, ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ ಎಂಬ ಬಗ್ಗೆ ಇಸ್ಲಾಮಾಬಾದ್ ತನ್ನ ನಿಲುವಿಗೆ ದೃಢವಾಗಿ ನಿಂತಿದೆ ಎಂದು ಒತ್ತಿ ಹೇಳಿದರು.
ಪಾಕಿಸ್ತಾನ ವಾಯುಪಡೆಯ ತರಬೇತಿ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಕನಿಷ್ಠ 17 ಪಾಕಿಸ್ತಾನಿ ಸೈನಿಕರನ್ನು ಕೊಂದು ಹಾಕಿದ ಕೆಲ ದಿನಗಳ ನಂತರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕಾಕರ್ ಈ ಹೇಳಿಕೆ ನೀಡಿದ್ದಾರೆ.
ನವೆಂಬರ್ ಆರಂಭದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಕೇಂದ್ರಗಳ ಮೇಲೆ ಅನೇಕ ದಾಳಿ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂತ್ರಸ್ತರ ಕುಟುಂಬಗಳಿಗೆ ನಾವು ನಮ್ಮ ಸಂತಾಪ ವ್ಯಕ್ತಪಡಿಸುತ್ತೇವೆ. ಆದರೆ, ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವಾಗ ಅಮೆರಿಕನ್ ಪಡೆಗಳು ಯಾವುದೇ ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೋಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ ಎಂದು ಪಟೇಲ್ ಹೇಳಿದ್ದರು.
ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ದೊಡ್ಡ ಪ್ರಮಾಣದ ಮಿಲಿಟರಿ ಅನುದಾನದ ನೆರವು ಸ್ಥಗಿತಗೊಂಡಿದ್ದರೂ ಕಾನೂನು ವ್ಯವಸ್ಥೆ, ಮಾದಕವಸ್ತು ನಿಗ್ರಹ ಕಾರ್ಯಾಚರಣೆಗಳು ಮತ್ತು ಭದ್ರತಾ ವ್ಯವಸ್ಥೆಯ ಇತರ ಕ್ಷೇತ್ರಗಳನ್ನು ಬೆಂಬಲಿಸಲು ನಾವು 40 ವರ್ಷಗಳಿಗಿಂತ ಹೆಚ್ಚು ಕಾಲ ಪಾಕಿಸ್ತಾನದೊಂದಿಗೆ ಪಾಲುದಾರರಾಗಿದ್ದೇವೆ ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆ ಎಂದು ಪಟೇಲ್ ಹೇಳಿದ್ದರು.
ಪಾಕಿಸ್ತಾನದಲ್ಲಿ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆ ಎಂದು ಅಮೆರಿಕ ಒಪ್ಪಿಕೊಳ್ಳುವುದು ಅಥವಾ ನಿರಾಕರಿಸುವುದು ಅಪ್ರಸ್ತುತವಾಗಿದೆ. ಏಕೆಂದರೆ ಈ ಶಸ್ತ್ರಾಸ್ತ್ರಗಳು ಕಪ್ಪು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ ಮತ್ತು ಅವುಗಳನ್ನು ನಮ್ಮ ವಿರುದ್ಧ ಬಳಸಲಾಗುತ್ತಿದೆ ಎಂದು ದೃಢೀಕರಿಸುವ ವಸ್ತುನಿಷ್ಠ ಪುರಾವೆಗಳಿವೆ ಎಂದು ಕಾಕರ್ ಹೇಳಿದರು. ಕಳೆದ ವರ್ಷ ನವೆಂಬರ್ನಲ್ಲಿ ತೆಹ್ರಿಕ್-ಇ ತಾಲಿಬಾನ್ ಉಗ್ರಗಾಮಿ ಗುಂಪು ಪಾಕಿಸ್ತಾನ ಸರ್ಕಾರದೊಂದಿಗಿನ ಕದನ ವಿರಾಮವನ್ನು ಕೊನೆಗೊಳಿಸಿದ ನಂತರ ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ.
ಇದನ್ನೂ ಓದಿ : ಫೋನ್ ಹ್ಯಾಕ್ ಆಗಿದ್ರೆ ತಿಳಿಯುವುದು ಹೇಗೆ?: ಹ್ಯಾಕ್ ಆಗದಂತೆ ತಡೆಯುವುದು ಹೇಗೆ.. ಇಲ್ಲಿದೆ ಡೀಟೇಲ್ಸ್!