ವಾಷಿಂಗ್ಟನ್ (ಅಮೆರಿಕ): ಜಾರ್ಜಿಯಾದಲ್ಲಿನ ಭಾರತೀಯ ಮೋಟೆಲ್ ಮ್ಯಾನೇಜರ್‌ಗೆ ಮಹಿಳೆಯೊಬ್ಬರನ್ನು ಕಳ್ಳಸಾಗಣೆ ಮತ್ತು ಗುಲಾಮಗಿರಿ ಮಾಡಿದ ಆರೋಪದ ಮೇರೆಗೆ 57 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಮತ್ತು ಏಳು ಜನರಿಗೆ 40,000 USD ಗಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಭಾರತೀಯ ಮೂಲದ ಅಮೆರಿಕದ ಖಾಯಂ ನಿವಾಸಿಯಾದ 71 ವರ್ಷದ ಶ್ರೀಶ್ ತಿವಾರಿ ಅವರು 2020 ರಲ್ಲಿ ಜಾರ್ಜಿಯಾದ ಕಾರ್ಟರ್ಸ್‌ವಿಲ್ಲೆಯಲ್ಲಿ ಬಜೆಟ್‌ಟೆಲ್ ಮೋಟೆಲ್ ಅನ್ನು ನಿರ್ವಹಿಸಲು ಪ್ರಾರಂಭಿಸಿದರು. (ಮೋಟೆಲ್ ಅನ್ನು ಮೋಟಾರು ಹೋಟೆಲ್ ಅಥವಾ ಮೋಟರ್ ಲಾಡ್ಜ್ ಎಂದೂ ಕರೆಯುತ್ತಾರೆ, ಇದು ವಾಹನ ಚಾಲಕರಿಗಾಗಿ ವಿನ್ಯಾಸಗೊಳಿಸಲಾದ ಹೋಟೆಲ್ ಆಗಿದೆ). ತಿವಾರಿ ಅವರು ಮಹಿಳೆಯನ್ನು ಮೋಟೆಲ್‌ನಲ್ಲಿ ಸೇವಕಿಯಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು ಮತ್ತು ಅವರಿಗೆ ಕೊಠಡಿಯನ್ನು ಒದಗಿಸಿದ್ದರು.
ಸಂತ್ರಸ್ತೆ ಈ ಹಿಂದೆ ಹೆರಾಯಿನ್ ವ್ಯಸನದಿಂದ ಬಳಲುತ್ತಿದ್ದರು ಮತ್ತು ತನ್ನ ಚಿಕ್ಕ ಮಗುವಿನ ಪಾಲನೆ ಮಾಡುವುದನ್ನು ಮಿಸ್ ಮಾಡಿಕೊಂಡಿದ್ದರು ಎಂಬ ಸಂಗತಿ ಅರಿತ ಶ್ರೀಶ್ ತಿವಾರಿ, ಸಂತ್ರಸ್ತೆಗೆ ವೇತನ, ಅಪಾರ್ಟ್‌ಮೆಂಟ್ ಮತ್ತು ವಕೀಲರನ್ನು ಒದಗಿಸುವ ಮೂಲಕ ತನ್ನ ಮಗುವಿನ ಪಾಲನೆಯನ್ನು ಮರಳಿ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ, ಸಂತ್ರಸ್ತೆಗೆ ನೀಡಿದ ಭರವಸೆ ಈಡೇರಿಸದೇ ಆಕೆಯು ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂವಹನ ಮಾಡದಂತೆ ನಿರುತ್ಸಾಹಗೊಳಿಸಿದ್ದ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಮತ್ತು ಮೋಟೆಲ್‌ನಲ್ಲಿ ಆಕೆಗೆ ಒದಗಿಸಿದ ಕೊಠಡಿಯಿಂದ ಹೊರಹಾಕುವುದಾಗಿ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದ ಎಂದು ಪ್ರಾಸಿಕ್ಯೂಟರ್‌ಗಳು ವಾದ ಮಂಡಿಸಿದ್ದರು.
ಸಂತ್ರಸ್ತೆಯ ಮಾದಕ ದ್ರವ್ಯ ಸೇವನೆಯ ಬಗ್ಗೆ ಕಾನೂನು ಜಾರಿ ಅಥವಾ ಮಕ್ಕಳ ಕಲ್ಯಾಣ ಸಂಸ್ಥೆಗಳಿಗೆ ವರದಿ ಮಾಡುವುದಾಗಿ ತಿವಾರಿ ಬೆದರಿಕೆ ಹಾಕಿದ್ದಾನೆ. ರಾತ್ರಿ ವೇಳೆ ಯಾವುದೇ ಸೂಚನೆ ನೀಡದೆ ಅವಳನ್ನು ತನ್ನ ಕೋಣೆಯಿಂದ ಹೊರಗೆ ಹಾಕಿದ್ದಾನೆ. ಜೊತೆಗೆ, ಸಂತ್ರಸ್ತೆಗೆ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ ಎಂದು ವಕೀಲರು ಹೇಳಿದ್ದಾರೆ.
ಇದನ್ನೂ ಓದಿ : 8 ಭಾರತೀಯರಿಗೆ ಮರಣದಂಡನೆ ಪ್ರಕರಣ : ಭಾರತದ ಮೇಲ್ಮನವಿ ಸ್ವೀಕರಿಸಿದ ಕತಾರ್ ಕೋರ್ಟ್
"ಮನುಷ್ಯ ಕಳ್ಳಸಾಗಣೆಯು ಎಲ್ಲಿಯಾದರೂ ಸಂಭವಿಸಬಹುದು, ಏಕೆಂದರೆ ಕಳ್ಳಸಾಗಣೆದಾರರು ಸಾಮಾನ್ಯ ವ್ಯಕ್ತಿಗಳ ದುರ್ಬಲತೆಗಳನ್ನು ಗುರುತಿಸುವಲ್ಲಿ ನಿಪುಣರಾಗಿರುತ್ತಾರೆ ಮತ್ತು ಆಗಾಗ್ಗೆ ಮೋಸದಿಂದ ಕಷ್ಟದ ಪರಿಸ್ಥಿತಿಗಳನ್ನು ಸುಧಾರಿಸಲು ಅವಕಾಶ ಹುಡುಕುವವರಿಗೆ ಭರವಸೆ ನೀಡುತ್ತಾರೆ" ಎಂದು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಸಹಾಯಕ ಅಟಾರ್ನಿ ಜನರಲ್ ಕ್ರಿಸ್ಟನ್ ಕ್ಲಾರ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.