ವಾಷಿಂಗ್ಟನ್(ಅಮೆರಿಕ): ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಿರಂತರ ನಡೆಸುತ್ತಿರುವ ಯೆಮೆನ್ ದೇಶದ ಹೌತಿ ಬಂಡುಕೋರರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಗುರುವಾರ ಸತತ ಐದನೇ ಬಾರಿಗೆ ಯೆಮೆನ್‌ನಲ್ಲಿರುವ ಹೌತಿ ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಬೈಡೆನ್ ಪ್ರತಿಕ್ರಿಯಿಸಿದರು.
ಹೌತಿ ಬಂಡುಕೋರರ ನಾಯಕ ಅಬ್ದೆಲ್ ಮಾಲೆಕ್ ಅಲ್-ಹೌತಿ ಗುರುವಾರ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ, ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಪ್ರಯಾಣಿಸುವ ಹಡಗುಗಳ ಮೇಲೆ ದಾಳಿ ಮುಂದುವರೆಸುತ್ತೇವೆ. ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಹಮಾಸ್ ಹಾಗು ಪ್ಯಾಲೆಸ್ತೀನ್ ಬೆಂಬಲಕ್ಕಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ಪ್ರತೀಕಾರದ ದಾಳಿ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಾಲೆಕ್, ಈ ಕ್ರಮಗಳಿಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಕಳವಳ: ಈ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿ ಮಾಡುತ್ತೇವೆ ಎನ್ನುವ ಹೌತಿಗಳ ವಿರುದ್ಧ ಇತರ ದೇಶಗಳೂ ಆಕ್ರೋಶ ವ್ಯಕ್ತಪಡಿಸಿವೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಭಾರತ ಹೇಳಿದೆ. ಬುಧವಾರ ರಾತ್ರಿ ಏಡನ್ ಕೊಲ್ಲಿಯಲ್ಲಿ ಡ್ರೋನ್ ದಾಳಿ ಎದುರಿಸಿದ ಸರಕು ಹಡಗನ್ನು ಭಾರತೀಯ ಯುದ್ಧನೌಕೆ ರಕ್ಷಿಸಿದೆ. ಇದರಲ್ಲಿ 9 ಭಾರತೀಯರು ಸೇರಿ ಒಟ್ಟು 22 ಸಿಬ್ಬಂದಿ ಇದ್ದರು.
ವಿದೇಶಾಂಗ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ರಣಧೀರ್ ಜೈಶ್ವಾಲ್, ಕೆಂಪು ಸಮುದ್ರದಲ್ಲಿ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರದೇಶ ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಪ್ರಮುಖ ಸಾರಿಗೆ ಮಾರ್ಗವಾಗಿದೆ. ಭಾರತೀಯ ನೌಕಾಪಡೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಭಾರತೀಯ ಹಡಗುಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದರು.
ಇದನ್ನೂ ಓದಿ: ಪನಾಮ ಕಾಲುವೆಗೂ ಬರದ ಬರೆ: ಹಡಗು ಸಂಚಾರ ಕಡಿತ, ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ