ಲಹೈನಾ, ಹವಾಯಿ: ದಿನದಿಂದ ದಿನಕ್ಕೆ ಕಾಳ್ಗಿಚ್ಚು ಹೆಚ್ಚು ಅನೇಕ ಕಡೆ ವ್ಯಾಪಿಸುತ್ತಿದೆ. ಮಾಯಿ ದ್ವೀಪದಲ್ಲಿ ಸಂಭವಿಸಿದ ವಿನಾಶಕಾರಿ ಕಾಳ್ಗಿಚ್ಚಿನಿಂದ ಅಪಾರ ಸಾವು ನೋವು ಸಂಭವಿಸುತ್ತಿದೆ. ಆ.9 ರಂದು ಅವಘಡ ಸಂಭವಿಸಿದ್ದು, ಈಗ ಮೃತರ ಸಂಖ್ಯೆ 67ಕ್ಕೆ ಏರಿಕೆ ಆಗಿದೆ. ಹವಾಯಿ ಗವರ್ನರ್ ಜೋಶ್ ಗ್ರೀನ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರೀನ್, ಆ ಎಲ್ಲ ಸಾವುಗಳು ಬಯಲು ಪ್ರದೇಶಗಳಲ್ಲಿ ಸಂಭವಿಸಿವೆ. ಕಟ್ಟಡಗಳಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಲಹೈನಾ ಬಳಿಯ ಕಾಳ್ಗಿಚ್ಚು ನಂದಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಹೊಸ ಹೊಸ ಸವಾಲುಗಳು ಕೂಡಾ ಎದುರಾಗಿವೆ.
ಕಾಳ್ಗಿಚ್ಚಿನಿಂದ ಐತಿಹಾಸಿಕ ನಗರ ತನ್ನ ಚಹರೆಯನ್ನೇ ಕಳೆದುಕೊಂಡಿದೆ. ಕೆಲವೊಂದು ಸ್ಥಳಗಳಲ್ಲಿ ಇಂಟರ್ನೆಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೂರವಾಣಿ ಕರೆಗಳು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಅನೇಕ ಸವಾಲುಗಳೆದುರು ನಾವು ಜನರ ರಕ್ಷಣಗೆ ಮುಂದಾಗಿದ್ದೇವೆ. ಪ್ರಸ್ತುತ ಜನರ ರಕ್ಷಣೆ ಮತ್ತು ಅವರಿಗೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸಲು ಕಾರ್ಯ ಕೈಗೊಳ್ಳಲಾಗಿದೆ ಎಂದು ಗ್ರೀನ್ ಹೇಳಿದರು.
"ದೊಡ್ಡ ವಿಪತ್ತು": ಅಧ್ಯಕ್ಷ ಜೋ ಬೈಡನ್ ಜೋಶ್ ಗ್ರೀನ್ ಅವರೊಂದಿಗೆ ಕಾಳ್ಗಿಚ್ಚಿನ ಬಗ್ಗೆ ಫೋನ್ ಮೂಲಕ ಮಾತನಾಡಿದ್ದಾರೆ. ಹವಾಯಿ ಕಾಳ್ಗಿಚ್ಚನ್ನು "ದೊಡ್ಡ ವಿಪತ್ತು" ಎಂದು ಘೋಷಿಸಿದ್ದಾರೆ. ಕಳೆದುಕೊಂಡ ಅಮೂಲ್ಯ ಜೀವಗಳು ಮತ್ತು ಭೂಮಿ ನಾಶವಾದ ಬಗ್ಗೆ ಅವರು ಸಂತಾಪ ಸೂಚಿಸಿದ್ದಾರೆ. ಪ್ರೀತಿಪಾತ್ರರನ್ನು ಹಾಗೂ ಮನೆಯನ್ನು ಕಳೆದುಕೊಂಡವರಿಗೆ ಫೆಡರಲ್ ವಿಪತ್ತು ಸಹಾಯ ನೀಡುವ ವಾಗ್ದಾನ ಕೂಡಾ ಮಾಡಿದ್ದಾರೆ.
ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ ಮಾಯಿಯಲ್ಲಿ ತುರ್ತು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ದ್ವೀಪದಲ್ಲಿ ಲಭ್ಯವಿರುವ ಎಲ್ಲ ಕೋಸ್ಟ್ ಗಾರ್ಡ್ ಮತ್ತು ಏರ್ ಫೋರ್ಸ್ ಸಿಬ್ಬಂದಿಗೆ ಹವಾಯಿ ನ್ಯಾಷನಲ್ ಗಾರ್ಡ್ನೊಂದಿಗೆ ಕೆಲಸ ಮಾಡುವಂತೆ ಬೈಡನ್ ಇದೇ ವೇಳೆ ಆದೇಶಿಸಿದ್ದಾರೆ. ನಮ್ಮ ಪ್ರಾರ್ಥನೆಗಳು ಹವಾಯಿಯ ಜನರೊಂದಿಗೆ ಇವೆ. ನಮ್ಮ ಪ್ರಾರ್ಥನೆ ಮಾತ್ರವಲ್ಲ, ನಮ್ಮಲ್ಲಿರುವ ಪ್ರತಿಯೊಂದು ಸೌಲಭ್ಯವು ಅವರಿಗೆ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಳ್ಗಿಚ್ಚು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಆದರೆ, ಈವರೆಗೆ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎಂದು ಹವಾಯಿ ತುರ್ತು ನಿರ್ವಹಣಾ ವಕ್ತಾರ ಆಡಮ್ ವೈಂಟ್ರಬ್ ಹೇಳಿದ್ದಾರೆ. ನಾವು ಇನ್ನೂ ಜೀವ ಸಂರಕ್ಷಣಾ ಕ್ರಮದಲ್ಲಿದ್ದೇವೆ. ಹುಡುಕಾಟ ಮತ್ತು ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಿದೆ ಎಂದಿದ್ದಾರೆ.
ಮಾರಕ ನೈಸರ್ಗಿಕ ವಿಪತ್ತು: ಚಂಡಮಾರುತದ ಭೀಕರ ಗಾಳಿಯಿಂದ ಈ ವಾರ ಮಾಯಿಯ ಭಾಗಗಳಲ್ಲಿ ಕಾಳ್ಗಿಚ್ಚು ವ್ಯಾಪಕವಾಗಿ ಹರಡಿದೆ. ಇದು ವ್ಯಾಪಕವಾಗಿ ಹರಡಿ 67 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಖಚಿತಪಡಿಸಿದ್ದಾರೆ. ಸಂತ್ರಸ್ತರ ನೆರವಿಗಾಗಿ ರಾಜ್ಯಪಾಲರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಹವಾಯಿಯ ನಿವಾಸಿಗಳು ಲಹೈನಾ ಮತ್ತು ಮಾಯಿ ನಿವಾಸಿಗಳಿಗೆ ಎಲ್ಲಾ ಭಾವನಾತ್ಮಕ ಮತ್ತು ಆರ್ಥಿಕ ಬೆಂಬಲ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಓದಿ: Maui wildfires: ಹವಾಯಿಯಲ್ಲಿ ಕಾಳ್ಗಿಚ್ಚಿನ ಅಟ್ಟಹಾಸ.. ಈವರೆಗೆ 53 ಮಂದಿ ಅಗ್ನಿಗಾಹುತಿ