ನ್ಯೂಯಾರ್ಕ್, ಅಮೆರಿಕ: ಉಕ್ರೇನ್‌ನಿಂದ ನಿರ್ದಿಷ್ಟ ವಿನಂತಿಯ ಮೇರೆಗೆ ಉಕ್ರೇನ್‌ಗೆ ಇಪ್ಪತ್ತಾರು ಬಗೆಯ ಔಷಧಗಳನ್ನು ಒಳಗೊಂಡಿರುವ ತನ್ನ 12 ನೇ ಮಾನವೀಯ ನೆರವು ಕಳುಹಿಸಲು ಭಾರತ ಸಿದ್ಧ ಎಂದು ವಿಶ್ವಸಂಸ್ಥೆಗೆ ನಮ್ಮ ರಾಯಭಾರಿ ಅಭಯ ನೀಡಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದ, ವಿಶ್ವಸಂಸ್ಥೆಯಲ್ಲಿನ ದೇಶದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಉಕ್ರೇನ್‌ಗೆ ಭಾರತ ಮಾನವೀಯ ನೆರವು ಕಳುಹಿಸಲು ಸಜ್ಜಾಗಿದೆ. ಈ ಮಾನವೀಯ ನೆರವಿನಲ್ಲಿ ಮಕ್ಕಳು ಮತ್ತು ವಯಸ್ಕರಲ್ಲಿ ಆಳವಾದ ಗಾಯಗಳ ರಕ್ತಸ್ರಾವ ತಡೆಯಲು 'ಹೆಮೋಸ್ಟಾಟಿಕ್ ಬ್ಯಾಂಡೇಜ್'ಗಳನ್ನು ಒಳಗೊಂಡಿದೆ ಎಂದು ಹೇಳಿದರು.
ದೇಶದಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟನ್ನು ನಿಭಾಯಿಸಲು ಉಕ್ರೇನಿಯನ್ ಅಧಿಕಾರಿಗಳು ಭಾರತ ಸರ್ಕಾರದಿಂದ ಸಹಾಯ ಕೋರಿದ್ದರು. ಹೀಗಾಗಿ ನಾವು 12ನೇ ಮಾನವೀಯ ಸಹಾಯವನ್ನು ನೀಡಲು ಸಜ್ಜಾಗಿದ್ದೇವೆ. ಈಗಾಗಲೇ ನಾವು ಜಗತ್ತಿಗೆ ಲಸಿಕೆಗಳನ್ನು ತಲುಪಿಸಿದ್ದೇವೆ. ಇದಕ್ಕೂ ಮುನ್ನ ನಾವು ಔಷಧಗಳನ್ನು ನೀಡಿದ್ದೇವೆ. ಹೀಗಾಗಿ ಜಾಗತಿಕ ದಕ್ಷಿಣವು ಆಹಾರ, ಆರೋಗ್ಯ ಮತ್ತು ಇಂಧನ ಭದ್ರತೆಯ ಅಂಶಗಳ ಮೇಲೆ ನಿರ್ಬಂಧಿತವಾದಾಗ ಭಾರತವು ಮುಂದೆ ಹೆಜ್ಜೆ ಇಡುತ್ತದೆ ಎಂದು ನಾನು ಈ ಮಂಡಳಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಕಾಂಬೋಜ್ ಅಭಯ ನೀಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಉದ್ಭವಿಸುವ ಆರ್ಥಿಕ ಸವಾಲುಗಳನ್ನು ತಗ್ಗಿಸಲು, ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಉತ್ತೇಜಿಸುವುದು ಭಾರತದ ವಿಧಾನವಾಗಿದೆ. ಗೋಧಿ ಮತ್ತು ಸಕ್ಕರೆ ಪೂರೈಕೆಗಾಗಿ ಭಾರತವನ್ನು ಹಲವು ದೇಶಗಳು ಸಂಪರ್ಕಿಸಿದ್ದು, ನಾವು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದೇವೆ ಎಂದು ರಾಯಭಾರಿ ಹೇಳಿದರು.
ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಭಾರತದ ನೆರವು: ಕಳೆದ 3 ತಿಂಗಳಲ್ಲಿ ಭಾರತವು ಅಫ್ಘಾನಿಸ್ತಾನ, ಮ್ಯಾನ್ಮಾರ್, ಸುಡಾನ್ ಮತ್ತು ಯೆಮೆನ್ ಸೇರಿದಂತೆ ಅಗತ್ಯವಿರುವ ದೇಶಗಳಿಗೆ 1.8 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಗೋಧಿಯನ್ನು ರಫ್ತು ಮಾಡಿದೆ. ಉಕ್ರೇನ್ ಸಂಘರ್ಷದ ಪರಿಣಾಮವು ಯುರೋಪ್‌ಗೆ ಸೀಮಿತವಾಗಿಲ್ಲ.
ಆದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ, ರಸಗೊಬ್ಬರ ಮತ್ತು ಇಂಧನ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಮಾತುಕತೆಯನ್ನು ಭಾರತ ಪ್ರೋತ್ಸಾಹಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಒಂದಕ್ಕಿಂತ ಹೆಚ್ಚು ಬಾರಿ ಮಾತನಾಡಿದ್ದಾರೆ ಎಂದು ರುಚಿರಾ ಕಾಂಬೋಜ್ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನುಇದೇ ವೇಳೆ ಖಂಡಿಸಿದರು.
ಜಾಗತಿಕ ಅಭದ್ರತೆ ಹೋಗಲಾಡಿಸಲು ಕ್ರಮ: ಬುಧವಾರ ನಡೆದ ಸಭೆಯಲ್ಲಿ ಆಹಾರದ ಕೊರತೆ ಮತ್ತು ಗಗನಕ್ಕೇರುತ್ತಿರುವ ಬೆಲೆಗಳ ಪರಿಣಾಮವಾಗಿ ಜಾಗತಿಕ ಆಹಾರ ಅಭದ್ರತೆಯ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡುವ ರೀತಿಯಲ್ಲಿ ವಿಶ್ವಸಂಸ್ಥೆ ಒಂದು ಒಪ್ಪಂದವನ್ನು ರೂಪಿಸಲಾಗಿದೆ.
ಸುಮಾರು ಆರು ತಿಂಗಳನಿಂದಲೂ ನಡೆಯುತ್ತಿರುವ ಯುದ್ಧದಿಂದ ಉಕ್ರೇನ್‌ನಲ್ಲಿ ಕನಿಷ್ಠ 972 ಮಕ್ಕಳು ಸಾವನ್ನಪ್ಪಿದ್ದಾರೆ. ಅನೇಕ ಮಕ್ಕಳು ಗಾಯಗೊಂಡಿದ್ದಾರೆ, ಪ್ರತಿದಿನ ಸರಾಸರಿ ಐದಕ್ಕಿಂತ ಹೆಚ್ಚು ಮಕ್ಕಳನ್ನು ಕೊಲೆ ಮಾಡುತ್ತಿದ್ದಾರೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ನಂತರ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಿಂದ ವಿಶ್ವದ ಬೇರೆ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರಿದ್ದನ್ನು ತಳ್ಳಿ ಹಾಕುವಂತಿಲ್ಲ. ಎಲ್ಲೋ ನಡೆದ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರ ಸರಕುಗಳ ಬೆಲೆ ಗಗನಕ್ಕೇರಿದ್ದು, ತೀವ್ರ ಏರಿಳಿತಗಳನ್ನು ಎದುರಿಸುತ್ತಿವೆ.
ಮತ್ತೊಂದೆಡೆ, ಯುದ್ಧದಿಂದ ಸಾವಿರಾರು ನಾಗರಿಕರು ಮತ್ತು ಸೈನಿಕರು ಪ್ರಾಣ ಕಳೆದುಕೊಂಡರೆ ಲಕ್ಷಾಂತರ ಜನರು ಮನೆ, ಆಸ್ತಿ ತೊರೆದ ಘಟನೆಗಳು ನಡೆದಿವೆ. ರಷ್ಯಾ ರಾಷ್ಟ್ರಕ್ಕಿಂತ ಉಕ್ರೇನ್ನ ಯಾವುದೇ ನಗರ ಅಥವಾ ಪಟ್ಟಣವನ್ನು ನೋಡಿದರೂ ಶವಗಳಿಂದ ತುಂಬಿರುವ ದೃಶ್ಯಗಳು ಕಾಣಸಿಗುತ್ತವೆ. ಆದರೂ ಎರಡೂ ದೇಶಗಳು ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ. ಆರು ತಿಂಗಳಿನಿಂದ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ.
ಓದಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 6 ತಿಂಗಳು.. ವಿಶ್ವದ ಆರ್ಥಿಕ ಮಟ್ಟ ಕುಸಿತ