ಮಾಸ್ಕೊ (ರಷ್ಯಾ): ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಮತ್ತೊಮ್ಮೆ 'ಪರಮಾಣು' ಯುದ್ಧದ ಬೆದರಿಕೆಯನ್ನು ಒಡ್ಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಕೀವ್ನ ಪ್ರತಿದಾಳಿಯು ಯಶಸ್ವಿಯಾದಲ್ಲಿ ಮಾಸ್ಕೋ ಪರಮಾಣು ಅಸ್ತ್ರವನ್ನು ಬಳಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಮೆಡ್ವೆಡೆವ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಕಾಮೆಂಟ್ ಮಾಡಿದ್ದು, ಉಕ್ರೇನ್ ಪಡೆಗಳು ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದಲ್ಲಿ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.
"ನ್ಯಾಟೋ ಬೆಂಬಲಿತ ಉಕ್ರೇನ್ ಆಕ್ರಮಣವು ಯಶಸ್ವಿಯಾದರೆ ಮತ್ತು ಅವರು ನಮ್ಮ ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದರೆ ರಷ್ಯಾದ ಅಧ್ಯಕ್ಷರ ತೀರ್ಪಿನ ಪ್ರಕಾರ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಬೇಕಾಗುತ್ತದೆ" ಎಂದು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿರುವ ಮೆಡ್ವೆಡೆವ್ ಹೇಳಿದರು. "ಅಂಥ ಸಮಯದಲ್ಲಿ ಬೇರೆ ಯಾವುದೇ ಆಯ್ಕೆ ನಮ್ಮ ಬಳಿ ಇರುವುದಿಲ್ಲ. ಆದ್ದರಿಂದ ನಮ್ಮ ಶತ್ರುಗಳು ನಮ್ಮ ಯೋಧರ ಯಶಸ್ಸಿಗಾಗಿ ಪ್ರಾರ್ಥಿಸಬೇಕು. ಆ ಮೂಲಕ ಅವರು ಜಾಗತಿಕ ಪರಮಾಣು ಯುದ್ಧ ಆರಂಭವಾಗದಂತೆ ನೋಡಿಕೊಳ್ಳಬೇಕು" ಎಂದು ಅವರು ಹೇಳಿದರು.
ಮೆಡ್ವೆಡೆವ್ ರಷ್ಯಾದ ಪರಮಾಣು ನೀತಿಯ ಬಗ್ಗೆ ಮಾತನಾಡಿದ್ದಾರೆ. ರಷ್ಯಾದ ವಿರುದ್ಧ ಆಕ್ರಮಣ ನಡೆದಾಗ ಅದಕ್ಕೆ ಪ್ರತಿಕ್ರಿಯೆಯಾಗಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬುದು ರಷ್ಯಾದ ಪರಮಾಣು ನೀತಿಯಾಗಿದೆ. ರಷ್ಯಾ ಸ್ವಾಧೀನಪಡಿಸಿಕೊಂಡ ಮತ್ತು ತನ್ನ ದೇಶದ ಸ್ವಂತ ಭಾಗವೆಂದು ಪುಟಿನ್ ಘೋಷಿಸಿದ ಪ್ರದೇಶವನ್ನು ಹಿಂಪಡೆಯಲು ಉಕ್ರೇನ್ ರಷ್ಯನ್ನರ ವಿರುದ್ಧ ಪ್ರತಿದಾಳಿ ನಡೆಸಿದೆ.
ಆದಾಗ್ಯೂ, ಈ ಪ್ರತಿದಾಳಿಯ ಪರಿಣಾಮವೇನಾಗಿದೆ ಎಂಬುದು ಇನ್ನೂ ನಿಖರವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ತನ್ನ ಯುದ್ಧ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಮತ್ತು ಜೂನ್ 4 ರಿಂದ ಉಕ್ರೇನ್ ಮಿಲಿಟರಿ ಗಮನಾರ್ಹ ನಷ್ಟ ಅನುಭವಿಸಿದೆ ಎಂದು ಪುಟಿನ್ ಕಳೆದ ವಾರ ಹೇಳಿದ್ದಾರೆ.
ಪರಮಾಣು ಯುದ್ಧದ ಬಗ್ಗೆ ಮೆಡ್ವೆಡೆವ್ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಇದೇ ಮೊದಲ ಸಲವಲ್ಲ. ಯುಎಸ್‌ನಲ್ಲಿ 2023 ರಲ್ಲಿ ಅಂತರ್ಯುದ್ಧ ಪ್ರಾರಂಭವಾಗಲಿದೆ ಮತ್ತು ಈಗ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಸೋತರೆ ಅದು ಪರಮಾಣು ಯುದ್ಧಕ್ಕೆ ಕಾರಣವಾಗಬಹುದು ಎಂದು ಪುಟಿನ್ ಅವರ ಆಪ್ತ ಮಿತ್ರ ಮೆಡ್ವೆಡೆವ್ ಈ ಹಿಂದೆ ಹೇಳಿದ್ದರು.
ಮಾಸ್ಕೋದ ಮೇಲೆ ಹಾರಿ ಬಂದ ಮೂರು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿದೆ. ಡ್ರೋನ್ ದಾಳಿಯಿಂದ ಬಹುಮಹಡಿ ಕಟ್ಟಡದಲ್ಲಿದ್ದ ಸರ್ಕಾರಿ ಕಚೇರಿಗಳಿಗೆ ಹಾನಿಯಾಗಿದೆ. ಆದರೆ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಏತನ್ಮಧ್ಯೆ ಈ ದಾಳಿಗಳಿಗೆ ಉಕ್ರೇನ್ ನೇರವಾಗಿ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ. ಆದರೆ ಯುದ್ಧವು ಕ್ರಮೇಣ ರಷ್ಯಾದ ಒಳಗಿನ ಪ್ರದೇಶಕ್ಕೆ ನುಸುಳಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೂಚ್ಯವಾಗಿ ಹೇಳಿದ್ದಾರೆ. ಉಕ್ರೇನ್ನ ಈಶಾನ್ಯ ಭಾಗಗಳಲ್ಲಿ ಭಾರೀ ಕಾಳಗ ನಡೆಯುತ್ತಿದ್ದು, ಉಕ್ರೇನಿಯನ್ ಪಡೆಗಳು ತಮ್ಮ ಭೂಮಿಯನ್ನು ಹಿಡಿದಿಟ್ಟುಕೊಂಡು ಕೆಲ ಪ್ರದೇಶಗಳಲ್ಲಿ ಮುನ್ನಡೆ ಸಾಧಿಸುತ್ತಿವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : Remi Lucidi died: ಸ್ಟಂಟ್ ಮಾಡುತ್ತ 68ನೇ ಮಹಡಿಯಿಂದ ಬಿದ್ದು ಸಾವಿಗೀಡಾದ ಸ್ಟಂಟ್ ಮ್ಯಾನ್ ರೆಮಿ ಲುಸಿಡಿ