ಟೋಕಿಯೋ: ನಾಲ್ಕು ವರ್ಷದೊಳಗಿನ ಮಕ್ಕಳಿಗಾಗಿ ನರ್ಸಿಂಗ್ ಹೋಮ್ವೊಂದು ಅದ್ಭುತ ಕೊಡುಗೆ ನೀಡಿದೆ. ಚಿಕ್ಕ ಮಕ್ಕಳಿಗೂ ಉದ್ಯೋಗ ನೀಡಲಾಗುವುದು. ಅಷ್ಟೇ ಅಲ್ಲ ಆಕರ್ಷಕ ವೇತನ ನೀಡುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ. ಅಮ್ಮನ ಮಡಿಲಲ್ಲಿ ಆಡುವ ಈ ಪುಟಾಣಿಗಳ ಕೆಲಸವೇನು? ಅನ್ನೋದು ನಿಮ್ಮ ಪ್ರಶ್ನೆ ಅಲ್ಲವೇ.. ಅದಕ್ಕೆ ಇಲ್ಲಿದೆ ಉತ್ತರ.
ಜಪಾನ್‌ನ ಕಿಟಾಕ್ಯುಶುನಲ್ಲಿರುವ ನರ್ಸಿಂಗ್ ಹೋಂವೊಂದು ಇಂತಹದ್ದೊಂದು ಘೋಷಣೆ ಮಾಡಿದೆ. ಅಲ್ಲಿಯೇ ಉಳಿದುಕೊಂಡಿರುವ ವಯೋವೃದ್ಧರಿಗೆ ಕಂಪನಿ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸಲು ಈ ಪುಟ್ಟ ಬಾಲಕಿಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಉದ್ಯೋಗ ನೀಡುವ ಮೊದಲು ಒಪ್ಪಂದವನ್ನೂ ಮಾಡಿಕೊಳ್ಳಲಾಗುತ್ತದೆ. ಮಕ್ಕಳು ನಾಲ್ಕು ವರ್ಷದೊಳಗಿನವರಾಗಿರಬೇಕು. ಅವರು ತಮ್ಮ ಇಷ್ಟದ ಸಮಯದಲ್ಲಿ ನರ್ಸಿಂಗ್ ಹೋಂಗೆ ಬರಬಹುದು. ಹಸಿವು ಅಥವಾ ನಿದ್ದೆ ಬಂದರೆ ಅವರವರ ಮನಸ್ಥಿತಿಗೆ ಅನುಗುಣವಾಗಿ ವಿರಾಮವನ್ನೂ ತೆಗೆದುಕೊಳ್ಳಬಹುದು ಎಂದು ನರ್ಸಿಂಗ್ ಹೋಮ್ ಹೇಳಿದೆ
ಈ ನರ್ಸಿಂಗ್ ಹೋಮ್ನಲ್ಲಿ 80ರ ಹರೆಯದ ಸುಮಾರು 100 ಮಂದಿ ವೃದ್ಧರಿದ್ದಾರೆ. ಇದುವರೆಗೆ 30 ಮಕ್ಕಳನ್ನು ಈ ರೀತಿ ಗುತ್ತಿಗೆಯಡಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನರ್ಸಿಂಗ್ ಹೋಮ್ ಮಾಲೀಕರು ಮಾಹಿತಿ ನೀಡಿದ್ದಾರೆ.
ಈ ರೀತಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಉದ್ದೇಶ ಎಂದರೆ ವೃದ್ದರನ್ನು ಸುಖವಾಗಿ ಸಂತಸವಾಗಿಡುವುದು. ಮಕ್ಕಳ ಮುಖವನ್ನು ತೋರಿಸಿ ಅವರಲ್ಲಿ ಮಂದಹಾಸ ಮೂಡಿಸುವುದು ನರ್ಸಿಂಗ್ ಹೋಂನ ಉದ್ದೇಶವಾಗಿದೆ. ಈ ಕೆಲಸಕ್ಕೆ ಸೇರಿದ ಮಕ್ಕಳು ತಮ್ಮ ಪಾಲಕರೊಂದಿಗೆ ಇಡೀ ನರ್ಸಿಂಗ್ ಹೋಮ್ ಸುತ್ತುವುದೇ ಕೆಲಸ ಎನ್ನುತ್ತಾರೆ ಇಲ್ಲಿನ ಮಾಲೀಕರು.
ಅಷ್ಟೇ ಅಲ್ಲ ಇಲ್ಲಿ ಕೆಲಸಕ್ಕೆ ಸೇರಿದ ಮಕ್ಕಳಿಗೆ ಸಂಬಳದ ಜತೆ ಡೈಪರ್ ಮತ್ತು ಹಾಲಿನ ಪುಡಿಯನ್ನು ಸಹ ನೀಡಲಾಗುತ್ತದೆ. ನರ್ಸಿಂಗ್ ಹೋಮ್ನ ಈ ಪ್ರಯತ್ನ ವಯೋವೃದ್ಧರಲ್ಲಿ ಸಂತಸ ಮೂಡಿಸುತ್ತಿದ್ದು, ಉತ್ತಮ ಫಲ ನೀಡುತ್ತಿದೆ. ಅಜ್ಜಂದಿರು ಮೊಮ್ಮಕ್ಕಳೊಂದಿಗೆ ಕಾಲ ಕಳೆಯಲು ಇದು ನೆರವಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಎಲ್ಲರ ಹೃದಯವೂ ಒಂದೇ ಸಮನೆ ಮಿಡಿಯುವುದಿಲ್ಲ..! ಯಾಕೆ ಗೊತ್ತಾ..?