ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರದಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ವಿವಾದ ಮಾಡಿಕೊಂಡಿರುವ ಕೆನಡಾ, ಭಾರತದೊಂದಿಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಯಕೆ ವ್ಯಕ್ತಪಡಿಸಿತ್ತು. ಅದಾಗಿ ಕೆಲ ದಿನಗಳ ನಂತರ ಈಗ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ವಾಷಿಂಗ್ಟನ್ನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದರು. ಟ್ರುಡೊ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು ಮಾತ್ರವಲ್ಲದೆ ಕೆನಡಾದ ಅನೇಕ ಮಿತ್ರರಾಷ್ಟ್ರಗಳೇ ಅವರ ಹೇಳಿಕೆಗೆ ಬೆಂಬಲ ನೀಡಿರಲಿಲ್ಲ.
ಆದಾಗ್ಯೂ, ಅಮೆರಿಕದಲ್ಲಿ ನಡೆದ ಸಭೆಯ ಬಗ್ಗೆ ಎರಡೂ ದೇಶಗಳು ಸಂಪೂರ್ಣ ಮೌನ ವಹಿಸಿವೆ. ಟ್ರುಡೊ ಭಾನುವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ 2 ಬಿನ್ ಅಲ್-ಹುಸೇನ್ ಅವರಿಗೆ ಕರೆ ಮಾಡಿ ಕೆನಡಾ ಮತ್ತು ಭಾರತದ ನಡುವಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ಕಾನೂನಿನ ನಿಯಮ ಮತ್ತು ರಾಜತಾಂತ್ರಿಕ ಸಂಬಂಧಗಳ ವಿಷಯದಲ್ಲಿ ವಿಯೆನ್ನಾ ಒಪ್ಪಂದವನ್ನು ಗೌರವಿಸುವ ಬಗ್ಗೆ ಅವರು ಒತ್ತಿಹೇಳಿದ್ದರು.
ತನ್ನ ಮಿತ್ರರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯದಿಂದ ಯಾವುದೇ ಬೆಂಬಲ ಸಿಗದೆ ಒಬ್ಬಂಟಿಯಾಗಿರುವ ಕೆನಡಾಕ್ಕೆ ಭಾರತದೊಂದಿಗೆ ಸೌಹಾರ್ದವನ್ನು ಮರುಸ್ಥಾಪಿಸುವುದು ಅನಿವಾರ್ಯವಾಗಿದೆ. ಈ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಕೆನಡಾದ ವಿದೇಶಾಂಗ ಸಚಿವೆ ತಮ್ಮ ದೇಶವು ಸಮಸ್ಯೆಯನ್ನು ಖಾಸಗಿಯಾಗಿ ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.
"ನಾವು ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಕೆನಡಾ ರಾಜತಾಂತ್ರಿಕರ ಸುರಕ್ಷತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಖಾಸಗಿಯಾಗಿ ಮಾತುಕತೆ ನಡೆಸುವುದನ್ನು ಮುಂದುವರಿಸುತ್ತೇವೆ. ರಾಜತಾಂತ್ರಿಕ ಸಂಭಾಷಣೆಗಳು ಖಾಸಗಿಯಾಗಿ ಉಳಿದಾಗಲೇ ಉತ್ತಮ ಎಂದು ನಾವು ಭಾವಿಸುತ್ತೇವೆ" ಎಂದು ಕೆನಡಾದ ಸಚಿವೆ ಹೇಳಿದ್ದರು.
ತನ್ನ ರಾಯಭಾರ ಕಚೇರಿಯಲ್ಲಿನ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ಭಾರತದ ತೀವ್ರ ಒತ್ತಡಕ್ಕೆ ಮಣಿದ ಕೆನಡಾ ಸುಮಾರು 30 ರಾಜತಾಂತ್ರಿಕ ಸಿಬ್ಬಂದಿಯನ್ನು ಭಾರತದಿಂದ ಕೌಲಾಲಂಪುರ್ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿತ್ತು. ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಟ್ರುಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿತ್ತು. ಜೂನ್ 18 ರಂದು ಇಬ್ಬರು ಮುಸುಕುಧಾರಿ ಬಂದೂಕುಧಾರಿಗಳು ನಿಜ್ಜರ್ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಇದನ್ನೂ ಓದಿ : ಗೂಗಲ್ ಸೈನ್ಇನ್ಗೆ ಕಡ್ಡಾಯವಾಗಲಿದೆ ಪಾಸ್ ಕೀ.. ಏನಿದು ಹೊಸ ವಿಧಾನ?