ಕೀವ್( ಉಕ್ರೇನ್): ಉಕ್ರೇನ್ ಮೇಲಿನ ತನ್ನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಮಂಗಳವಾರ ಸಂಜೆ ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ಮೇಲೆ ರಷ್ಯಾ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.
ಡೊನೆಟ್ಸ್ಕ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ ಹೇಳುವ ಪ್ರಕಾರ, ಮಂಗಳವಾರ ಸ್ಥಳೀಯ ಕಾಲಮಾನ 7:30ರ ಸುಮಾರಿಗೆ ರಷ್ಯಾದಿಂದ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. "ನಾವೀಗ ನಗರದಲ್ಲಿ ಗಾಯಗೊಂಡವರು ಮತ್ತು ಪ್ರಾಯಶಃ ಸತ್ತವರ ಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಶ್ರಮಿಸುತ್ತಿದ್ದೇವೆ. ರಷ್ಯಾದ ಈ ದಾಳಿಯಿಂದ ಅಪಾರ ಸಾವು- ನೋವು ಸಂಭವಿಸಿದೆ. ಕ್ರಾಮಾಟೋರ್ಸ್ಕ್ ನಗರ ಪ್ರದೇಶವಾಗಿದ್ದು, ಜನದಟ್ಟಣೆಯಿಂದ ಕೂಡಿದೆ. ಹೀಗಾಗಿ ದೊಡ್ಡ ಮಟ್ಟದ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ರಷ್ಯಾ ನಡೆಸಿದ ಎರಡನೇ ಕ್ಷಿಪಣಿ ದಾಳಿ ನಗರದ ಹೊರವಲಯದಲ್ಲಿರುವ ಹಳ್ಳಿಯೊಂದರ ಮೇಲೆ ನಡೆದಿದೆ ಎಂದು ಸುದ್ದಿಯಾಗಿದೆ.
"ರಷ್ಯಾ ಉದ್ದೇಶಪೂರ್ವಕವಾಗಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ" ಎಂದು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಇಹೋರ್ ಕ್ಲೈಮೆಂಕೊ ಆರೋಪಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಟೆಲಿಗ್ರಾಂ ಪೋಸ್ಟ್ನಲ್ಲಿ ಈ ವಿಚಾರ ತಿಳಿಸಿದ್ದಾರೆ. ಈ ನಡುವೆ ಉಕ್ರೇನ್ ಸರ್ಕಾರ ಹಾಗೂ ಅಲ್ಲಿನ ಸ್ಥಳೀಯ ರಕ್ಷಣಾ ತಂಡಗಳು ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿವೆ. ದಾಳಿ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪಡೆಗಳು ತುರ್ತು ಸೇವೆಗಳನ್ನು ನೀಡುತ್ತಿವೆ. ಗಾಯಾಳುಗಳಿಗೆ ಸಹಾಯ ಮಾಡುತ್ತಿವೆ.
ಫೆಬ್ರವರಿ 24, 2022 ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧವು ಇದುವರೆಗೂ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ನಡೆಯುತ್ತಲೇ ಇದೆ. ಆರಂಭದಲ್ಲಿ ಯುದ್ಧ ನಿಲುಗಡೆಗೆ ಮಾತುಕತೆ ನಡೆಯಿತಾದರೂ ಆ ಬಳಿಕ ಅದು ನಿಂತಿದೆ. ಭಾರತ ಸೇರಿದಂತೆ ವಿಶ್ವಸಂಸ್ಥೆ ಯುದ್ಧ ನಿಲ್ಲಿಸುವಂತೆ ಎರಡೂ ರಾಷ್ಟ್ರಗಳಿಗೆ ಮನವಿ ಮಾಡಿದೆ. ಆದರೂ ಯುದ್ಧ ಮುಂದುವರೆದಿದೆ. ಎರಡೂ ರಾಷ್ಟ್ರಗಳು ತಮ್ಮ ನಿಲುವುಗಳಿಗೆ ಬದ್ಧವಾಗಿದ್ದು, ಹಠವನ್ನು ಮುಂದುವರೆಸಿವೆ.