ಲಂಡನ್ : ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿಯವರ ಅಳಿಯ, ಬ್ರಿಟನ್ ವಿತ್ತ ಸಚಿವ ರಿಷಿ ಸುನಾಕ್ ಮತ್ತು ಪುತ್ರಿ ಅಕ್ಷತಾ ಮೂರ್ತಿ ಸಂಡೇ ಟೈಮ್ಸ್ ಶ್ರೀಮಂತರ ವಾರ್ಷಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ 222ನೇ ರ‍್ಯಾಂಕ್ ಪಡೆದಿದ್ದು, ಇವರ ಆಸ್ತಿ 730 ಮಿಲಿಯನ್ ಎಂದು ಅಂದಾಜಿಸಲಾಗಿದೆ.
ಅಲ್ಲದೇ, ಈ ಮೂಲಕ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಬ್ರಿಟನ್ ಸಚಿವ ಎಂಬ ಹೆಗ್ಗಳಿಗೆಗೂ ಪಾತ್ರವಾಗಿದ್ದಾರೆ. ಅಕ್ಷತಾ ಮೂರ್ತಿ ಅವರು ಎನ್.ಆರ್.ನಾರಾಯಣ ಮೂರ್ತಿ ಪುತ್ರಿಯಾಗಿದ್ದು, ರಿಷಿ ಸುನಾಕ್ ಅವರನ್ನು ವರಿಸಿದ್ದಾರೆ. 42 ವರ್ಷದ ರಿಷಿ 2015ರಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸಂಸತ್ ಸದಸ್ಯರಾಗಿದ್ದರು. ಈ ಹಿಂದೆಯೇ ಸುನಕ್ ಅವರನ್ನು ಭವಿಷ್ಯದ ಪ್ರಧಾನಿ ಎಂದೂ ಹೇಳಲಾಗಿತ್ತು.
ಅಕ್ಷತಾ ಮೂರ್ತಿ ಇನ್ಫೋಸಿಸ್ನಲ್ಲಿ ಶೇ.0.93ರಷ್ಟು ಪಾಲು ಹೊಂದಿದ್ದು, ಇದರ ಮೌಲ್ಯವೇ 690 ಮಿಲಿಯನ್ ಆಗಲಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ತಮ್ಮ ಲಾಭಾಂಶದ ತೆರಿಗೆ ಕಟ್ಟದ ವಿಚಾರ ಮುನ್ನೆಲೆಗೆ ಬಂದಿತ್ತು. ನಂತರ ಅವರು ಭಾರತವೂ ಸೇರಿ ತಾನು ಎಲ್ಲ ಆದಾಯದ ತೆರಿಗೆ ಕಟ್ಟುವುದಾಗಿ ಅಕ್ಷತಾ ಘೋಷಿಸಿದ್ದರು.