ಲಂಡನ್ (ಇಂಗ್ಲೆಂಡ್): ಯುನೈಟೆಡ್ ಕಿಂಗ್ಡಮ್ನಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರೆದಿದೆ. ಆರ್ಥಿಕ ಹಿಂಜರಿತ, ಕೊಟ್ಟ ಮಾತು ಉಳಿಸಿಕೊಳ್ಳದ ಆರೋಪದಿಂದಾಗಿ ಟ್ರಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ನಡುವೆ ಹೊಸ ಪ್ರಧಾನಿ ಆಯ್ಕೆಗೆ ತೀವ್ರ ಕಸರತ್ತು ನಡೆದಿದೆ. ಮತ್ತೊಂದೆಡೆ ಬ್ರಿಟನ್ ಪ್ರಧಾನಿ ರೇಸ್ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಮತ್ತೊಮ್ಮೆ ಮುನ್ನಡೆಯಲ್ಲಿದ್ದಾರೆ. ಈ ಬಾರಿಯಾದರೂ ರಿಷಿಗೆ ಇಂಗ್ಲೆಂಡ್ನ ಪಟ್ಟ ಒಲಿಯುತ್ತಾ ಎನ್ನುವುದು ಚರ್ಚೆಯ ವಿಚಾರವಾಗಿದೆ. ಭಾರತೀಯ ಮೂಲದ ಕನ್ಸರ್ವೇಟಿವ್ ಬ್ರಿಟಿಷ್ ರಾಜಕಾರಣಿ ರಿಷಿ ಸುನಕ್ ಅವರಿಗೆ ಈಗಾಗಲೇ ನೂರಕ್ಕೂ ಹೆಚ್ಚು ನಾಮನಿರ್ದೇಶನಗಳು ದೊರೆತಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಗೆ ಬಿಡ್ ಸಲ್ಲಿಸಲು ಅನುಮತಿ ದೊರೆತಂತಾಗಿದೆ.
ಪ್ರಧಾನಿ ಲಿಜ್ ಟ್ರಸ್ ಅವರ ರಾಜೀನಾಮೆ ಬಳಿಕ ಪಕ್ಷದ ನಾಯಕತ್ವಕ್ಕೆ ಸ್ಪರ್ಧಿಸಲು 100- ನಾಮನಿರ್ದೇಶನದ ಮಿತಿ ಇದೆ. ಈ ಮಿತಿಯನ್ನು ಈಗಾಗಲೇ ರಿಷಿ ಸುನಕ್ ಪಡೆದುಕೊಂಡಿದ್ದು, 100 ಜನ ನಾಮನಿರ್ದೇಶಿತರ ಒಪ್ಪಿಗೆ ಪಡೆದ ಮೊದಲ ಟೋರಿ ನಾಯಕತ್ವದ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೇವಲ ಕೆಲ ತಿಂಗಳ ಹಿಂದೆ ನಡೆದ ಬ್ರಿಟನ್ ನಾಯಕತ್ವ ಸ್ಪರ್ಧೆಯಲ್ಲಿ ಭಾರತೀಯ ಮೂಲಕ ಸುನಕ್ ಮೊದ ಮೊದಲು ಮುಂಚೂಣಿಯಲ್ಲಿದ್ದರು. ಆದರೆ ಬಳಿಕ ಟ್ರಸ್ ವಿರುದ್ಧ ರಿಷಿ ಸೋಲು ಅನುಭವಿಸಿ ಬ್ರಿಟನ್ ಪ್ರಧಾನಿ ಹುದ್ದೆ ಸಿಗದೇ ನಿರಾಶೆ ಅನುಭವಿಸಿದ್ದರು. ಗುರುವಾರ ಯುಕೆ ಪ್ರಧಾನಿಗೆ ಹುದ್ದೆಗೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.
ಮತ್ತೆ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದ ಬೋರಿಸ್ ಜಾನ್ಸನ್: ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಮತ್ತೆ ಪ್ರಧಾನಿ ರೇಸ್‌ಗೆ ಪ್ರವೇಶಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಮಾಜಿ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಕೂಡ ಸುನಕ್‌ಗೆ ಬೆಂಬಲ ದೃಢಪಡಿಸಿದ್ದಾರೆ.
"ನಾನು ಬೋರಿಸ್, ರಿಷಿ ಮತ್ತು ಪೆನ್ನಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ. ನಾನು ಮೂವರೂ ನಾಯಕರನ್ನು ಮೆಚ್ಚುತ್ತೇನೆ. ಇಂದು ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆರ್ಥಿಕ ಬಿಕ್ಕಟ್ಟು ಮತ್ತು ಅಧಿಕೃತ ನಾಯಕತ್ವವನ್ನು ಪುನಃಸ್ಥಾಪಿಸುವ ಅಗತ್ಯತೆಯೊಂದಿಗೆ, ನಮ್ಮ ದೇಶವನ್ನು ಮುನ್ನಡೆಸಲು ರಿಷಿ ಸುನಕ್ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ನಾನು ರಿಷಿಗೆ ಮತ ಹಾಕುತ್ತಿದ್ದೇನೆ ಮತ್ತು ನೀವೂ ಮಾಡುತ್ತೀರಿ ಎಂದು ಭಾವಿಸುತ್ತೇನೆ. ಎಂದು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಟೋರಿ ಸಂಸದ ನಿಗೆಲ್ ಮಿಲ್ಸ್ ಸಹ ಬೆಂಬಲ ಸೂಚಿಸಿದ್ದಾರೆ. ನಾಯಕತ್ವ ಸ್ಪರ್ಧೆಯಲ್ಲಿ ಸುನಕ್ ಅವರನ್ನು ಬೆಂಬಲಿಸದಿರುವುದು "ತಪ್ಪು" ಎಂದು ಟ್ವೀಟ್ ಮಾಡಿದ್ದಾರೆ. ಕೆಲವು ವಾರಗಳ ಹಿಂದೆ ನಾನು ನನ್ನ ಮನಸ್ಸನ್ನು ಬದಲಾಯಿಸಿದೆ ಮತ್ತು ರಿಷಿ ಸುನಕ್ ಅವರನ್ನು ಬೆಂಬಲಿಸಲಿಲ್ಲ. ನಾನು ಮತ್ತೆ ಅದೇ ತಪ್ಪನ್ನು ಮಾಡುತ್ತಿಲ್ಲ, ಅವರು ಸ್ಪಷ್ಟವಾಗಿ ಪ್ರಧಾನಿಯಾಗಿದ್ದಾರೆ. ನಾವು ಸ್ಥಿರತೆಯನ್ನು ಪುನಃಸ್ಥಾಪಿಸಲು ಮತ್ತು ದೇಶ ಎದುರಿಸುತ್ತಿರುವ ಅನೇಕ ಗಂಭೀರ ಸವಾಲುಗಳನ್ನು ನಿಭಾಯಿಸಬೇಕಾಗಿದೆ ಎಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ಲಿಜ್ ಟ್ರಸ್ ರಾಜೀನಾಮೆ: ಯಾರಾಗ್ತಾರೆ ಬ್ರಿಟನ್ ಪ್ರಧಾನಿ?.. ಇನ್ನೂ ಏನನ್ನೂ ಹೇಳದ ರಿಷಿ!