ಇಸ್ಲಾಮಾಬಾದ್(ಪಾಕಿಸ್ತಾನ): ಇಲ್ಲಿನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳುವ ದಿನಾಂಕ ನಿಗದಿಯಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರು ಪಾಕಿಸ್ತಾನದ ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ - ಎನ್ (ಪಿಎಂಎಲ್-ಎನ್) ನ ಮುಖ್ಯಸ್ಥರಾಗಿದ್ದಾರೆ. ಮಾಹಿತಿ ಪ್ರಕಾರ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅಕ್ಟೋಬರ್ 21 ರಂದು ಯುನೈಟೆಡ್ ಕಿಂಗ್ಡಮ್ನಿಂದ ಪಾಕಿಸ್ತಾನಕ್ಕೆ ಮರಳಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ವಾಹಿನಿ ಎಆರ್ವೈ ನ್ಯೂಸ್ ವರದಿ ಮಾಡಿದೆ.
ನವಾಜ್ ಷರೀಫ್ ಮೊದಲು ಲಂಡನ್ ನಿಂದ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ. ಅಲ್ಲಿಂದ ಅದೇ ದಿನ ಅವರು ಲಾಹೋರ್‌ಗೆ ಬಂದಿಳಿಯಲಿದ್ದಾರೆ. ವರದಿಯ ಪ್ರಕಾರ, ಅವರು 243 ಸಂಖ್ಯೆಯ ವಿಮಾನದ ಮೂಲಕ ಅಬುಧಾಬಿ ತಲುಪಲಿದ್ದಾರೆ. ಶರೀಫ್ ಅವರ ಬಿಸಿನೆಸ್ ಕ್ಲಾಸ್ ಟಿಕೆಟ್ ಈಗಾಗಲೇ ಬುಕ್ ಆಗಿದೆ. ಸಂಜೆ 6:25ಕ್ಕೆ ಅವರು ಲಾಹೋರ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮತ್ತೊಂದೆಡೆ, ಪಿಎಂಎಲ್-ಎನ್ ಉಪಾಧ್ಯಕ್ಷೆ ಮರಿಯಮ್ ನವಾಜ್ ಅವರು ನವಾಜ್ ಷರೀಫ್ ಅಕ್ಟೋಬರ್ 21 ರಂದು ಪಾಕಿಸ್ತಾನಕ್ಕೆ ಮರಳಲಿದ್ದಾರೆ ಎಂದು ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಭಾನುವಾರ ಲಾಹೋರ್‌ನಲ್ಲಿ ಪಿಎಂಎಲ್-ಎನ್ ಯುವ ಸ್ವಯಂ ಸೇವಕರು ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಮರಿಯಮ್ ನವಾಜ್, ದೇಶವನ್ನು ಎಲ್ಲ ರೀತಿಯ ಬಿಕ್ಕಟ್ಟಿನಿಂದ ಹೊರತರಲು ಪಿಎಂಎಲ್ - ಎನ್ ಮುಖ್ಯಸ್ಥ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ. ಯುವ ಸಮೂಹದ ಪ್ರಗತಿ, ಶಾಂತಿ ಮತ್ತು ಉದ್ಯೋಗ ಸೃಷ್ಟಿಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ. ನಾವು ದೇಶವನ್ನು ಹಣದುಬ್ಬರದಿಂದ ಮುಕ್ತಗೊಳಿಸುತ್ತೇವೆ. ನವಾಜ್ ದೇಶದ ದುರ್ಬಲ ಆರ್ಥಿಕತೆಯನ್ನು ಸರಿಪಡಿಸುತ್ತಾರೆ. ನವಾಜ್ ಷರೀಫ್ ಮಾತ್ರ ನಾಯಕ ಎಂಬುದನ್ನು ಅಕ್ಟೋಬರ್ 21 ರಂದು ಜನರು ಸಾಬೀತುಪಡಿಸಲಿದ್ದಾರೆ ಎಂದು ಅವರು ಹೇಳಿರುವುದಾಗಿ ಜಿಯೋ ನ್ಯೂಸ್ ವರದಿಯಲ್ಲಿ ತಿಳಿಸಿದೆ.
ಅವಾಮಿ ನ್ಯಾಷನಲ್ ಪಾರ್ಟಿ ನಾಯಕ ಗುಂಡೇಟಿಗೆ ಬಲಿ: ಇತ್ತೀಚಿಗೆ, ಪಾಕಿಸ್ತಾನದ ಅವಾಮಿ ನ್ಯಾಷನಲ್ ಪಾರ್ಟಿಯ(ಎಎನ್ಪಿ) ಸದಸ್ಯ ಜಾವೇದ್ ಖಾನ್ ಅವರನ್ನು ಕಳೆದ ಶನಿವಾರ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪಾಕಿಸ್ತಾನದ ಖೈಬರ್ ಪಂಕ್ತುಖ್ವಾದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಜಾವೇದ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಜಾವೇದ್ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಎಸ್ಪಿ ಜಾವದ್ ಖಾನ್, ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಹಳ ಹತ್ತಿರದಿಂದ ಗುಂಡಿನ ದಾಳಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ಜಿಂಬಾಬ್ವೆಯಲ್ಲಿ ವಿಮಾನ ಅಪಘಾತ: ಭಾರತದ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು