ಸಿಯಾಲ್ಕೋಟ್: ಜೈಶ್ ಭಯೋತ್ಪಾದಕ ಮತ್ತು ಪಠಾಣ್‌ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ನನ್ನು ಪಾಕಿಸ್ತಾನದ ಸಿಯಾಲ್ ಕೋಟ್ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. 41 ವರ್ಷದ ಶಾಹಿದ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ (ಜೆಎಂ) ಸಕ್ರಿಯ ಸದಸ್ಯನಾಗಿದ್ದಾನೆ. ಶಾಹಿದ್‌ನನ್ನು ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಈತನ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಭಾರತದಲ್ಲಿ 2016 ರಲ್ಲಿ ನಡೆದ ಪಠಾಣ್‌ಕೋಟ್ ದಾಳಿಯ ಹಿಂದಿನ ಪ್ರಮುಖ ಸಂಚುಕೋರನಾಗಿದ್ದ ಶಾಹಿದ್, ಸಿಯಾಲ್ ಕೋಟ್ನಲ್ಲಿರುವ ತನ್ನ ನೆಲೆಯಿಂದ ಪಠಾಣ್ಕೋಟ್ಗೆ ನಾಲ್ವರು ಜೈಶ್ ಭಯೋತ್ಪಾದಕರನ್ನು ಕಳುಹಿಸುವ ಮೂಲಕ ದಾಳಿಯನ್ನು ಸಂಘಟಿಸಿದ್ದ ಎಂದು ಆರೋಪಿಸಲಾಗಿದೆ. 1994 ರಲ್ಲಿ ಶಾಹಿದ್‌ನನ್ನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಆರೋಪದ ಮೇಲೆ ಭಾರತದಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು. 2010 ರಲ್ಲಿ ಈತನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು.
ವರದಿಗಳ ಪ್ರಕಾರ ಸಿಯಾಲ್ ಕೋಟ್ನ ಹೊರಭಾಗದಲ್ಲಿರುವ ಮಸೀದಿಯಲ್ಲಿ ಶಾಹಿದ್ ಲತೀಫ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ದಾಳಿಗೆ ತಕ್ಷಣದ ಕಾರಣ ತಿಳಿದುಬಂದಿಲ್ಲ. ದಾಳಿಕೋರರು ಘಟನಾ ಸ್ಥಳದಿಂದ ಮೋಟರ್ ಸೈಕಲ್ ನಲ್ಲಿ ಪರಾರಿಯಾಗಿದ್ದಾರೆ.
2016ರ ಜನವರಿ 2ರಂದು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದರು. ಗುಂಡಿನ ಚಕಮಕಿ ಮತ್ತು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಐದಕ್ಕೂ ಹೆಚ್ಚು ಭಯೋತ್ಪಾದಕರು ಮತ್ತು ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ದಾಳಿಕೋರರು ಭಾರತೀಯ ಸೇನೆಯ ಸಮವಸ್ತ್ರ ಧರಿಸಿ ಬಂದಿದ್ದರು. ಈ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧವು ಮತ್ತಷ್ಟು ಬಿಗಡಾಯಿಸಲು ಕಾರಣವಾಯಿತು.
ಲತೀಫ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಬಾಕಿ ಇತ್ತು. ಆದರೆ ಇತರ ಭಯೋತ್ಪಾದಕ ನಾಯಕರಂತೆ ಆತ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದ ಮತ್ತು ಭಾರತದ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸುವುದು ಮತ್ತು ಅವನ್ನು ಕಾರ್ಯಗತಗೊಳಿಸುವಲ್ಲಿ ಭಾಗಿಯಾಗಿದ್ದನು. 2010 ರಲ್ಲಿ, ಭಾರತವು ಲತೀಫ್ ಮತ್ತು ಇತರ 24 ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಿತ್ತು. ಇವರೆಲ್ಲರೂ ತಮಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತಷ್ಟು ದಿನ ಬಂಧನದಲ್ಲಿ ಇಡಲು ಸಾಧ್ಯವಿಲ್ಲ ಎಂಬ ಆಧಾರದ ಮೇಲೆ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು.
ಇದನ್ನೂ ಓದಿ : ವಾಶಿಂಗ್ಟನ್ನಲ್ಲಿ ಕೆನಡಾ-ಭಾರತ ವಿದೇಶಾಂಗ ಸಚಿವರ ರಹಸ್ಯ ಸಭೆ