ಇಸ್ಲಾಮಾಬಾದ್ (ಪಾಕಿಸ್ತಾನ): ಆರ್ಥಿಕ ಸಂಕಷ್ಟದಿಂದ ಹೈರಾಣಾಗಿರುವ ನೆರೆ ದೇಶ ಪಾಕಿಸ್ತಾನ ದುಸ್ಥಿತಿಯಿಂದ ಹೊರಬರಲು ಸರ್ಕಾರಿ ನೌಕರರ ವೇತನ ಕಡಿತ, ಸಬ್ಸಿಡಿ ರದ್ದು ಹಾಗು ವಿದ್ಯುತ್ ಉಳಿತಾಯದಂತಹ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಮಧ್ಯೆ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಕೊಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 35 ರೂಪಾಯಿಯಷ್ಟು ಹೆಚ್ಚಿಸಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಭಾನುವಾರ ಈ ಕುರಿತು ಹೇಳಿಕೆ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ.
ಜಾಗತಿಕ ಆರ್ಥಿಕ ನೆರವಿನ ಪ್ಯಾಕೇಜ್‌ಗೆ ವಿಧಿಸಲಾದ ಷರತ್ತುಗಳ ಕುರಿತು ಚರ್ಚಿಸಲು ಜನವರಿ 31 ರಿಂದ ಫೆಬ್ರವರಿ 9 ರವರೆಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ತಜ್ಞರ ತಂಡ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದು, ಬಳಿಕ ಈ ನಿರ್ಧಾರ ಹೊರಬಿದ್ದಿದೆ. "ಪಾಕಿಸ್ತಾನದಲ್ಲಿ ಕಳೆದ ವರ್ಷದ ಅಕ್ಟೋಬರ್‌ನಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ. ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆಯನ್ನು ಕಡಿಮೆ ಮಾಡಿದ್ದೇವೆ. ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಲಾ 35 ರೂಪಾಯಿಯಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ. ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಬೆಲೆಯಲ್ಲಿ ತಲಾ 18 ರೂ.ಗಳಷ್ಟು ಏರಿಕೆಯಾಗಿದೆ" ಎಂದು ಇಶಾಕ್ ದಾರ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಸದ್ಯ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 249.80 ರೂ. ಹೈ ಸ್ಪೀಡ್ ಡೀಸೆಲ್ ದರ 262.80 ರೂ, ಸೀಮೆ ಎಣ್ಣೆ 189.83 ರೂ ಮತ್ತು ಲೈಟ್ ಡೀಸೆಲ್ ತೈಲ 187 ರೂ.ಗೆ ತಲುಪಿದೆ. ಬೆಲೆ ಏರಿಕೆ ಘೋಷಣೆಯಾದ ತಕ್ಷಣ ವಾಹನ ಸವಾರರು ಬಂಕ್ಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿದ್ದಾರೆ. ಪ್ರಸ್ತುತ ಸರ್ಕಾರ ದೇಶದ ಆರ್ಥಿಕತೆಯ ನಿರ್ವಹಣೆಯನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಟೀಕಿಸಿದ್ದಾರೆ.
ಪಾಕಿಸ್ತಾನದ ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹ ಸಂಪೂರ್ಣ ಕುಸಿದಿದೆ. ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸರ್ಕಾರ, ಐಎಂಎಫ್‌ನಿಂದ ಸಾಲ ಪಡೆಯಲು ಗಂಭೀರ ಪ್ರಯತ್ನ ನಡೆಸುತ್ತಿದೆ. ಐಎಂಎಫ್ ಸಾಲ ಒದಗಿಸುವ ಸಲುವಾಗಿ ಸಾಕಷ್ಟು ಷರತ್ತುಗಳನ್ನು ಹಾಕಿದೆ. ವಿದ್ಯುತ್ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳಬೇಕು, ಅನಿಲ ಶುಲ್ಕವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ನಿಗದಿಪಡಿಸಬೇಕು. ಪಾಕಿಸ್ತಾನಿ ರೂಪಾಯಿ ವಿನಿಮಯ ದರವನ್ನು ಮಾರುಕಟ್ಟೆಯ ಆಧಾರದ ಮೇಲೆ ನಿರ್ಧರಿಸಬೇಕು. ನಿಷೇಧ ಸಾಲದ ಪತ್ರಗಳನ್ನು ತೆಗೆದುಹಾಕಬೇಕೆಂಬ ಷರತ್ತುಗಳನ್ನು ಹಾಕಿದೆ. ಇದಕ್ಕೆ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾದ್ ಷರೀಫ್ ಇತ್ತೀಚೆಗೆ ತಿಳಿಸಿದ್ದರು. ಈ ಕ್ರಮದಲ್ಲಿ ಪಾಕಿಸ್ತಾನ ರೂಪಾಯಿ ವಿನಿಮಯ ದರದ ನಿಯಮಗಳನ್ನು ಸಡಿಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಕ್ ಭಾರಿ ಆರ್ಥಿಕ ಹಿನ್ನಡೆಗೆ ಒಳಗಾಗಿದೆ. ಇದರಿಂದ ಹೊರಬರಲು ಸರ್ಕಾರ ತಿಣುಕಾಡುತ್ತಿದೆ. ಅಭಿವೃದ್ಧಿ ಸ್ತಬ್ಧಗೊಂಡಿದೆ. ಜನರು ಆಹಾರ ವಸ್ತುಗಳಿಗೂ ಪರದಾಡುತ್ತಿದ್ದಾರೆ. ಆಡಳಿತ ಯಂತ್ರವೂ ಕುಸಿದಿದೆ ಎಂಬುದಕ್ಕೆ ಈ ಹಿಂದೆ ಹಣಕಾಸು ಸಚಿವ ಐಸಾಕ್ ದಾರ್ ಮಾತನಾಡುತ್ತಾ,"ಇನ್ನು ನಮ್ಮನ್ನು ಆ ದೇವರೇ ಕಾಪಾಡಬೇಕು" ಎಂದು ಹೇಳಿರುವುದೇ ಸಾಕ್ಷಿ.!
ಇದನ್ನೂ ಓದಿ: ಪಾಕ್ ರೂಪಾಯಿ ಮೌಲ್ಯ ಕುಸಿತ.. ನಮ್ಮನ್ನ ದೇವರೇ ಕಾಪಾಡ್ಬೇಕು: ಹಣಕಾಸು ಸಚಿವ