ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದಲ್ಲಿ ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಹಂಗಾಮಿ ಪ್ರಧಾನಿಯ ನಾಮನಿರ್ದೇಶನದ ಕುರಿತು ಇಂದು ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ವಿರೋಧ ಪಕ್ಷದ ನಾಯಕರು ಸಭೆ ಸೇರಲಿದ್ದಾರೆ.
ಆಗಸ್ಟ್ 9ರಂದು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಲಾಗಿತ್ತು. ನಿನ್ನೆ (ಗುರುವಾರ) ಶೆಹಬಾಜ್ ಷರೀಫ್ ಅವರು ವಿಪಕ್ಷ ನಾಯಕ ರಾಜಾ ರಿಯಾಜ್ ಅವರನ್ನು ಭೇಟಿಯಾಗಿದ್ದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದರು.
ಈ ಭೇಟಿಯ ನಂತರ ಸಂಸತ್ ಭವನದಲ್ಲಿ ಮಾತನಾಡಿದ ವಿಪಕ್ಷ ನಾಯಕ ರಿಯಾಜ್, ಹಂಗಾಮಿ ಪ್ರಧಾನಿಯ ಹೆಸರನ್ನು ನಿರ್ಧರಿಸಲು ಯಾವುದೇ ಆತುರವಿಲ್ಲ ಎಂದರು. ಇನ್ನೊಂದೆಡೆ, ಪಾಕ್ನ ಪತ್ರಿಕೆಗಳು ವರದಿ ಮಾಡಿರುವಂತೆ, ನಿರ್ಗಮಿತ ಪ್ರಧಾನಿ ಆಗಸ್ಟ್ 12 ರಂದು ಹಂಗಾಮಿಯ ಹೆಸರನ್ನು ಘೋಷಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭ ಆಗಸ್ಟ್ 14 ಸಂಜೆ ಅಥವಾ ಮರುದಿನ ನಡೆಯಲಿದೆ.
ಹೀಗಾಗಿ ನಿರ್ಗಮಿತ ಶೆಹಬಾಜ್ ಷರೀಫ್ ಆಗಸ್ಟ್ 14 ರವರೆಗೆ ಅಧಿಕಾರದಲ್ಲಿ ಉಳಿಯಲು ಬಯಸುತ್ತಾರೆ ಎಂದು ರಾಜಕೀಯ ವಲಯದ ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ಅವರು ಈ ವರ್ಷದ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಬಹುದು. ನಂತರ ಹಂಗಾಮಿ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.
ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ ಈ ಹುದ್ದೆಗೆ ಪ್ರಬಲ ಸ್ಪರ್ಧಿಗಳ ಪೈಕಿ ಒಬ್ಬರು. ಇವರಿಗೆ ಎರಡೂ ಪಕ್ಷಗಳ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ. ಅಲ್ಲದೇ ಸಂಜ್ರಾನಿ ಅವರು ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ (ಪಿಡಿಎಂ) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಪಾಕ್ನ ಪ್ರಭಾವಿ ಪತ್ರಿಕೆಯೊಂದು ಸಂಜ್ರಾನಿಯನ್ನು ಹಂಗಾಮಿ ಪ್ರಧಾನಿಯ ಪ್ರಬಲ ಅಭ್ಯರ್ಥಿ ಎಂದು ಪ್ರಕಟಿಸಿದೆ.
ಇತರ ಸಂಭಾವ್ಯ ಸ್ಪರ್ಧಿಗಳೆಂದರೆ, ಮಾಜಿ ರಾಜತಾಂತ್ರಿಕ ಜಿಲಾಲ್ ಅಬ್ಬಾಸ್ ಜಿಲಾನಿ, ಮಾಜಿ ಹಣಕಾಸು ಮಂತ್ರಿಗಳಾದ ಹಫೀಜ್ ಶೇಖ್, ಇಶಾಕ್ ದಾರ್, ಮಾಜಿ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ, ಮಾಜಿ ಪ್ರಧಾನ ಕಾರ್ಯದರ್ಶಿ ಫವಾದ್ ಹಸನ್ ಫವಾದ್ ಮತ್ತು ಮಾಜಿ ನ್ಯಾಯಮೂರ್ತಿ ತಸ್ಸಾದುಕ್ ಜಿಲಾನ್. ಇದಲ್ಲದೇ ಹೊರಗಿನಿಂದ ಮೂರನೇ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಿಲ್ಲ. ಸಮಯಕ್ಕೆ ಮುನ್ನವೇ ನಾವು ಉಸ್ತುವಾರಿ ಪ್ರಧಾನಿ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ರಿಯಾಜ್ ಹೇಳಿದ್ದಾರೆ.
ಹಂಗಾಮಿ ಪ್ರಧಾನಿಯ ಹೆಸರನ್ನು ನಿರ್ಧರಿಸಲು ಶೆಹಬಾಜ್ ಷರೀಫ್ ಮತ್ತು ರಿಯಾಜ್ ಅವರಿಗೆ ಇನ್ನೂ ಎರಡು ದಿನಗಳಿವೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಶನಿವಾರದೊಳಗೆ (ಆಗಸ್ಟ್ 12) ಹೆಸರು ಪ್ರಕಟಿಸಲಾಗುವುದು. ಮೂರು ದಿನಗಳ ಸಮಯ ಮೀರಿದಲ್ಲಿ ಆಯ್ಕೆಯ ವಿಷಯವನ್ನು ನೇರವಾಗಿ ಸಂಸದೀಯ ಸಮಿತಿ ಸೇರಲಿದೆ.
ಇದನ್ನೂ ಓದಿ: ಮುಂದಿನ ತಿಂಗಳು ನವಾಜ್ ಶರೀಫ್ ಪಾಕಿಸ್ತಾನಕ್ಕೆ ವಾಪಸ್; ನಿರ್ಗಮಿತ ಪ್ರಧಾನಿ ಶಹಬಾಜ್