ಇಸ್ಲಾಮಾಬಾದ್ (ಪಾಕಿಸ್ತಾನ) : ಇಲ್ಲಿನ ಅವಾಮಿ ನ್ಯಾಷನಲ್ ಪಾರ್ಟಿಯ(ಎಎನ್ಪಿ) ಸದಸ್ಯ ಜಾವೇದ್ ಖಾನ್ ಅವರನ್ನು ಶನಿವಾರ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪಾಕಿಸ್ತಾನದ ಖೈಬರ್ ಪಂಕ್ತುಕ್ವಾದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಜಾವೇದ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಜಾವೇದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಬೈಕಿನಲ್ಲಿ ಬಂದ ಅಪರಿಚಿತರಿಂದ ಗುಂಡಿನ ದಾಳಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್ಪಿ ಜಾವದ್ ಖಾನ್, ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಹಳ ಹತ್ತಿರದಿಂದ ಗುಂಡಿನ ದಾಳಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಮೃತ ಎಎನ್ಪಿ ನಾಯಕ ಜಾವೇದ್ ಖಾನ್ ಪುತ್ರ ಅಬ್ಬಾಸ್ ಖಾನ್ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ನಾನು ಇಲ್ಲಿನ ಸ್ವಾಬಿ ನಗರದಲ್ಲಿರುವ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದೆ. ಈ ವೇಳೆ ತಂದೆ ಮೇಲೆ ಗುಂಡಿನ ದಾಳಿ ನಡೆದಿರುವ ಸುದ್ದಿ ತಿಳಿಯಿತು. ನಾನು ತಕ್ಷಣ ಸ್ಥಳಕ್ಕೆ ತೆರಳಿ ನೋಡಿದಾಗ ನನ್ನ ತಂದೆಯವರು ಇಲ್ಲಿನ ಖಾಸೀಂ ಖೇಲ್ ಪ್ರದೇಶದ ಸ್ವಾಬಿ ಸ್ಮಶಾನದ ಬಳಿ ಗುಂಡೇಟಿಗೆ ಬಲಿಯಾಗಿದ್ದರು ಎಂದು ತಿಳಿಸಿದರು.
ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ತಂದೆ ಮೇಲೆ ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿ, ಹತ್ಯೆಗೈದಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ. ಎಎನ್ಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವಾಬ್ ಜಾದಾ ಮಾತನಾಡಿ, ಇದು ಉಗ್ರ ಕೃತ್ಯವೋ ಇಲ್ಲ, ದ್ವೇಷದ ಕೃತ್ಯವೋ ಎಂದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ. ಇದು ಉಗ್ರ ಕೃತ್ಯವಲ್ಲ. ಕೌಟುಂಬಿಕ ಸೇಡಿನಿಂದ ನಡೆದಿರುವ ಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಉದ್ದೇಶಿತ ಹತ್ಯೆಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯ : ಕಳೆದ ಸೆಪ್ಟೆಂಬರ್ನಲ್ಲಿ ಬಾರ್ ಕಂಬರ್ ಖೇಲ್ ಬುಡಕಟ್ಟು ಜನಾಂಗದ ಹಿರಿಯರು ಇಲ್ಲಿ ಹೆಚ್ಚುತ್ತಿರುವ ಉದ್ದೇಶಿತ ಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಈ ಸಂಬಂಧ ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಬೇಕು. ಇಲ್ಲಿಯವರೆಗೆ ನಡೆದ ಉದ್ದೇಶಿತ ಹತ್ಯೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.