ಸಿಯೋಲ್ (ದಕ್ಷಿಣ ಕೊರಿಯಾ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಉತ್ತರಾಧಿಕಾರಿಯ ಸಿದ್ಧತೆಯಲ್ಲಿದ್ದಾರೆಯೇ ಎಂಬ ಗುಮಾನಿ ಎದ್ದಿದೆ. ಕಾರಣ ತಮ್ಮ 10 ವರ್ಷದ ಮಗಳನ್ನು ಸಾರ್ವಜನಿಕವಾಗಿ ಅವರು ಮತ್ತೆ ಕರೆತಂದಿದ್ದಾರೆ. ಶನಿವಾರ ಸರ್ವಾಧಿಕಾರಿಯ ತಂದೆ ದಿ. ಕಿಮ್ ಜೊಂಗ್ ಇಲ್ರ ಜಯಂತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಫುಟ್ಬಾಲ್ ಆಟ ಮತ್ತು ಕೆಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪುತ್ರಿ ಕಿಮ್ ಜು ಏ ಭಾಗವಹಿಸಿದ್ದರು.
ಉತ್ತರ ಕೊರಿಯಾದ ಸರ್ಕಾರಿ ಪತ್ರಿಕೆಯಾದ ರೋಡಾಂಗ್ ಸಿನ್ಮುನ್, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ರ ಮಗಳು ವಿಐಪಿ ಆಸನಗಳಲ್ಲಿ ಕುಳಿತು ನಗುತ್ತಿರುವ, ಚಪ್ಪಾಳೆ ತಟ್ಟುತ್ತಿರುವ ಫೋಟೋಗಳನ್ನು ಪ್ರಕಟಿಸಿದೆ. ಆಕೆ ಹಿರಿಯ ಸರ್ಕಾರಿ ಮತ್ತು ಮಿಲಿಟರಿ ಅಧಿಕಾರಿಗಳ ನಡುವೆ ಕುಳಿತಿದ್ದಳು. ಕಿಮ್ ಅವರ ಸಹೋದರಿ ಮತ್ತು ವಿದೇಶಾಂಗ ನೀತಿ ಅಧಿಕಾರಿಗಳಲ್ಲಿ ಒಬ್ಬರಾದ ಕಿಮ್ ಯೋ ಜೊಂಗ್ ಅವರ ಹಿಂದಿನ ಸಾಲಿನಲ್ಲಿ ಕಿಮ್ ಜು ಏ ಕುಳಿತಿರುವ ಚಿತ್ರಗಳಿವೆ.
ಇದಕ್ಕೂ ಮೊದಲು ಕಿಮ್ ಜಾಂಗ್ ತಮ್ಮ ಪುತ್ರಿಯನ್ನು ಕಳೆದ ನವೆಂಬರ್ನಲ್ಲಿ ಖಂಡಾಂತರ ಕ್ಷಿಪಣಿ ಹಾರಾಟ ಪರೀಕ್ಷೆಯ ವೇಳೆ ತಮ್ಮೊಂದಿಗೆ ಕರೆತಂದಿದ್ದರು. ಅದೇ ಮೊದಲ ಸಾರ್ವಜನಿಕ ಭೇಟಿಯಾಗಿತ್ತು. ಅಲ್ಲಿನ ಮಾಧ್ಯಮಗಳೂ ಕೂಡ ಆಕೆಯ ಚಿತ್ರವನ್ನು ಪ್ರಸಾರ ಮಾಡಿದ್ದವು. ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಕಳೆದ ವಾರ ನಡೆದ ಬೃಹತ್ ಮಿಲಿಟರಿ ಮೆರವಣಿಗೆಯಲ್ಲಿ ತಂದೆಯೊಂದಿಗೆ ಕಿಮ್ ಜು ಏ ಕಾಣಿಸಿಕೊಂಡಿದ್ದರು.
ಮೆರವಣಿಗೆಗೂ ಮೊದಲು ತನ್ನ ತಂದೆಯೊಂದಿಗೆ ಸೇನಾ ಭೇಟಿಯಲ್ಲಿ ಭಾಗವಹಿಸಿದ್ದಳು. ಬಳಿಕ ನಡೆದ ಔತಣಕೂಟದಲ್ಲಿ ಗೌರವಾನ್ವಿತರ ಸೀಟಿನಲ್ಲಿ ಆಸೀನಳಾಗಿದ್ದಳು. ಆಕೆಯನ್ನು ಪೋಷಕರು ಮತ್ತು ಜನರಲ್ಗಳು ಸುತ್ತುವರೆದಿದ್ದರು. ಇದೆಲ್ಲವೂ ಕಿಮ್ ಜಾಂಗ್ ತನ್ನ ನಂತರದ ಉತ್ತರಾಧಿಕಾರಿಯ ನೇಮಕದ ಸುಳಿವು ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಉತ್ತರ ಕೊರಿಯಾದ ರಾಜಪ್ರಭುತ್ವದಲ್ಲಿ ಕಿಮ್ ಕುಟುಂಬಕ್ಕೆ ಜನರಿಗಿರುವ ನಿಷ್ಠೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಆನುವಂಶಿಕ ಅಧಿಕಾರ ವರ್ಗಾವಣೆಗೆ ತಯಾರಿ ಮಾಡುವ ಗುರಿಯನ್ನು ಇದು ಹೊಂದಿದೆ ಎಂದು ಹೇಳಲಾಗಿದೆ.
ಕೊರಿಯಾದ ಮಾಧ್ಯಮಗಳೂ ಕೂಡ ಆಕೆಯನ್ನು "ಪ್ರೀತಿಯ" ಮತ್ತು "ಗೌರವಾನ್ವಿತ" ಎಂದು ಕರೆದಿವೆ. ಅಲ್ಲದೇ ಮಿಲಿಟರಿ ಪರೇಡ್ನಲ್ಲಿ ಹೊಸದಾಗಿ ಬಿಡುಗಡೆ ಮಾಡಲಾದ ಅಂಚೆ ಚೀಟಿಗಳಲ್ಲಿ ಆಕೆಯ ಫೋಟೋಗಳಿವೆ. ಈ ಎಲ್ಲಾ ಬೆಳವಣಿಗೆಗಳು ಆಕೆಯನ್ನು "ಭವಿಷ್ಯದ ನಾಯಕಿ" ಎಂದು ಪರಿಗಣಿಸುವುದಕ್ಕೆ ಬುನಾದಿ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಹೆಸರು ನಾಮಕರಣಕ್ಕೆ ನಿರ್ಬಂಧ: ಇನ್ನೊಂದು ಮಾಹಿತಿಯ ಪ್ರಕಾರ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಮಗಳ ಹೆಸರಾದ ಕಿಮ್ ಜು ಏ ಅನ್ನು ದೇಶದ ಯಾವುದೇ ಮಕ್ಕಳು ಹೊಂದುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾಗಿ ವರದಿಯಾಗಿದೆ. ದೇಶದಲ್ಲಿನ ಯಾವುದೇ ವ್ಯಕ್ತಿಗಳು ಕಿಮ್ ಜು ಏ ಹೆಸರನ್ನು ಹೊಂದಿದ್ದರೆ ಅದನ್ನು ಬೇಗನೇ ಬದಲಿಸಿಕೊಳ್ಳಬೇಕು. ಅಲ್ಲದೇ, ಮುಂದೆ ಯಾರೂ ಕೂಡ ಆ ಹೆಸರನ್ನು ತಮ್ಮ ಮಕ್ಕಳಿಗೆ ಸೂಚಿಸುವಂತಿಲ್ಲ. ಜನನಪ್ರಮಾಣ ಪತ್ರದಲ್ಲಿ ವಾರದೊಳಗೆ ಹೆಸರು ಬದಲಿಸಿಕೊಳ್ಳಲು ಆದೇಶಿಸಲಾಗಿದೆ ಎಂದು ಹೇಳಲಾಗಿದೆ.
2014 ರಲ್ಲಿ ಉತ್ತರ ಕೊರಿಯಾದ ನಾಯಕ ತನ್ನ ಸಂಬಂಧಿಕರು ಮತ್ತು ಹತ್ತಿರದ ಕುಟುಂಬಸ್ಥರು ಹೊಂದಿರುವ ಹೆಸರುಗಳನ್ನು ದೇಶದ ಪ್ರಜೆಗಳು ಹೊಂದಬಾರದು ಎಂದು ಆದೇಶಿದ್ದರು. ಸ್ವತಃ ತನ್ನ ಕಿಮ್ ಜಾಂಗ್ ಉನ್ ಹೆಸರನ್ನೂ ಯಾರೂ ಇಟ್ಟುಕೊಳ್ಳದಂತೆ ಸೂಚಿಸಿದ್ದರು.
ಇದನ್ನೂ ಓದಿ: 296 ಗಂಟೆ ಅವಶೇಷಗಳಡಿ ಉಸಿರಾಡುತ್ತಿದ್ದ ದಂಪತಿ ಕೊನೆಗೂ ರಕ್ಷಣೆ, ಪ್ರಾಣ ಬಿಟ್ಟ ಮಗು!