ಸಿಯೋಲ್ : ಉತ್ತರ ಕೊರಿಯಾ ಗುರುವಾರ ತನ್ನ ದೇಶದ ಪೂರ್ವ ಭಾಗದಲ್ಲಿ ಸಮುದ್ರದ ಕಡೆಗೆ ಎರಡು ಲಘು ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಇತ್ತೀಚೆಗಷ್ಟೇ ಅಂತ್ಯಗೊಂಡ ದಕ್ಷಿಣ ಕೊರಿಯಾ-ಯುಎಸ್ ಲೈವ್ ಫೈರ್ ಡ್ರಿಲ್‌ಗಳ ವಿರುದ್ಧ ಪ್ರತಿಭಟಿಸಲು ಉತ್ತರ ಕೊರಿಯಾ ತನ್ನ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಪುನಾರಂಭಿಸಿದೆ. ದಕ್ಷಿಣ ಕೊರಿಯಾ-ಯುಎಸ್ ಮಧ್ಯದ ಮಿಲಿಟರಿ ಶಸ್ತ್ರಾಭ್ಯಾಸಗಳನ್ನು ಉತ್ತರ ಕೊರಿಯಾ ತನ್ನ ದೇಶದ ಮೇಲಿನ ಆಕ್ರಮಣವೆಂದು ಭಾವಿಸುತ್ತಿದೆ.
ಮೇ ಅಂತ್ಯದಲ್ಲಿ ತನ್ನ ಮೊದಲ ಗೂಢಚಾರ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಪ್ರಯತ್ನದಲ್ಲಿ ಉತ್ತರ ಕೊರಿಯಾ ವಿಫಲವಾದ ನಂತರ ಇದು ಅದರ ಮೊದಲ ಕ್ಷಿಪಣಿ ಉಡಾವಣೆಯಾಗಿದೆ. ಗುರುವಾರ ಸಂಜೆ ತನ್ನ ರಾಜಧಾನಿ ಪ್ರದೇಶದಿಂದ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿದ್ದನ್ನು ಪತ್ತೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಮಿಲಿಟರಿ ತನ್ನ ಕಣ್ಗಾವಲು ಮಟ್ಟವನ್ನು ಹೆಚ್ಚಿಸಿದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ನಿಕಟ ಸಮನ್ವಯದಲ್ಲಿ ಸನ್ನದ್ಧತೆಯನ್ನು ಹೊಂದಿದೆ ಎಂದು ಅದು ಹೇಳಿದೆ.
ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ್ದನ್ನು ತಾನು ಪತ್ತೆ ಮಾಡಿರುವುದಾಗಿ ಜಪಾನ್ ರಕ್ಷಣಾ ಸಚಿವಾಲಯ ಹೇಳಿದೆ. ಕ್ಷಿಪಣಿಗಳಿಂದ ಎಚ್ಚರಿಕೆಯಿಂದ ಇರುವಂತೆ ಜಪಾನ್‌ನ ಕೋಸ್ಟ್ ಗಾರ್ಡ್ ಕೊರಿಯನ್ ಪೆನಿನ್ಸುಲಾ ಮತ್ತು ಜಪಾನ್ ಮತ್ತು ಉತ್ತರ ಪೆಸಿಫಿಕ್ ಸಮುದ್ರಗಳಲ್ಲಿನಹಡಗುಗಳಿಗೆ ಎಚ್ಚರಿಕೆ ನೀಡಿತು. ಕ್ಷಿಪಣಿ ಉಡಾವಣೆಯಿಂದ ಹಡಗು ಅಥವಾ ವಿಮಾನಗಳಿಗೆ ಹಾನಿಯಾದ ತಕ್ಷಣದ ವರದಿಗಳಿಲ್ಲ.
ದಕ್ಷಿಣ ಕೊರಿಯಾ ಮತ್ತು ಯುಎಸ್ ಪಡೆಗಳು ಎರಡೂ ಕೊರಿಯಾಗಳ ಮಧ್ಯದ ಭಾರಿ ಭದ್ರತೆಯ ಗಡಿಯ ಬಳಿ ಗುರುವಾರ ಐದನೇ ಸುತ್ತಿನ ದೊಡ್ಡ ಪ್ರಮಾಣದ ಲೈವ್ ಫೈರ್ ಡ್ರಿಲ್‌ಗಳನ್ನು ಕೊನೆಗೊಳಿಸಿದ ಕೆಲ ಗಂಟೆಗಳ ನಂತರ ಈ ಉಡಾವಣೆ ಮಾಡಲಾಗಿದೆ. ದಕ್ಷಿಣ ಕೊರಿಯಾ-ಯುಎಸ್ ಡ್ರಿಲ್‌ಗಳಿಗೆ ಪ್ರತಿಕ್ರಿಯೆ ನೀಡುವುದು ನಮಗೆ ಅನಿವಾರ್ಯವಾಗಿದೆ. ನಮ್ಮ ಸಶಸ್ತ್ರ ಪಡೆಗಳು ಯಾವುದೇ ರೀತಿಯ ಶತ್ರುಗಳ ಪ್ರಚೋದನೆಯನ್ನು ಸಮರ್ಥವಾಗಿ ಎದುರಿಸಲಿವೆ ಎಂದು ಉತ್ತರ ಕೊರಿಯಾದ ರಕ್ಷಣಾ ಸಚಿವಾಲಯದ ವಕ್ತಾರರು ಸರ್ಕಾರಿ ಮಾಧ್ಯಮಕ್ಕೆ ನೀಡಿದ ತಿಳಿಸಿದ್ದಾರೆ.
ಉತ್ತರ ಕೊರಿಯಾ 2022 ರ ಆರಂಭದಿಂದ ಸುಮಾರು 100 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಮೇ 31 ರಂದು ಉತ್ತರ ಕೊರಿಯಾದ ಪತ್ತೇದಾರಿ ಉಪಗ್ರಹವನ್ನು ಹೊತ್ತ ದೀರ್ಘ ಶ್ರೇಣಿಯ ರಾಕೆಟ್ ವಿಫಲಗೊಂಡು ಕೊರಿಯನ್ ಪೆನಿನ್ಸುಲಾದ ಪಶ್ಚಿಮ ಕರಾವಳಿಯಲ್ಲಿ ಅಪ್ಪಳಿಸಿತು. ಉತ್ತರ ಕೊರಿಯಾ ತನ್ನ ವೈಫಲ್ಯವನ್ನು ಒಪ್ಪಿಕೊಂಡಿತು ಮತ್ತು ಎರಡನೇ ಬಾರಿ ರಾಕೆಟ್ ಉಡಾವಣೆ ಮಾಡುವುದಾಗಿ ಹೇಳಿತ್ತು.
ಅಮೆರಿಕದಿಂದ ಎದುರಾಗಬಹುದಾದ ಸಂಭವನೀಯ ಅಪಾಯವನ್ನು ಎದುರಿಸಲು ಸಮರ್ಥ ಹೈಟೆಕ್ ಶಸ್ತ್ರಾಸ್ತ್ರಗಳನ್ನು ಹೊಂದಲು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಬಯಸುತ್ತಿದ್ದಾರೆ. ಈ ಹೈಟೆಕ್ ಶಸ್ತ್ರಾಸ್ತ್ರಗಳ ವ್ಯವಸ್ಥೆಗಳಲ್ಲಿ ಪತ್ತೇದಾರಿ ಉಪಗ್ರಹವೂ ಸೇರಿದೆ. ದಕ್ಷಿಣ ಕೊರಿಯಾ ಮತ್ತು ಯುಎಸ್, ಉತ್ತರ ಕೊರಿಯಾ ವಿರುದ್ಧ ಮಿಲಿಟರಿ ಬೆದರಿಕೆ ಮತ್ತು ಬ್ಲ್ಯಾಕ್ಮೇಲ್ಗಾಗಿ ಫೈರಿಂಗ್ ಡ್ರಿಲ್‌ಗಳನ್ನು ನಡೆಸುತ್ತಿವೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮವು ಇತ್ತೀಚೆಗೆ ಆರೋಪಿಸಿದೆ.
ಇದನ್ನೂ ಓದಿ : Consumer Electronics: ವೇರೆಬಲ್ ಮಾರ್ಕೆಟ್ನಲ್ಲಿ 200 ಕೋಟಿ ರೂ. ಹೂಡಿಕೆ ಮಾಡಲಿದೆ ಎಂಡೆಫೊ