ಇಸ್ಲಾಮಾಬಾದ್: ಪಾಕ್ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಅವರನ್ನು ಪದಚ್ಯುತಿಗೊಳಿಸಿದ ಬೆನ್ನಲ್ಲೇ ಇಂದು ರಾಷ್ಟ್ರೀಯ ಅಸೆಂಬ್ಲಿ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರು ಪಾಕ್ ನೂತನ ಪ್ರಧಾನಿಯಾಗಿ ಆಯ್ಕೆ ಆಗುವ ಸಾಧ್ಯತೆ ಇದೆ.
ಇಂದು ಮಧ್ಯಾಹ್ನ 2 ಗಂಟೆಗೆ ಪಾಕ್ ರಾಷ್ಟ್ರೀಯ ಅಸೆಂಬ್ಲಿಯು ಸದನದಲ್ಲಿ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಷರೀಫ್ ಹಾಗೂ ಪಿಟಿಐ ಮುಖ್ಯಸ್ಥ ಶಾ ಮಹಮೂದ್ ಖುರೇಶಿ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಶರೀಫ್ ಅವರು ನೂತನ ನೂತನ ಪ್ರಧಾನಿಯಾಗಿ ಆಯ್ಕೆ ಆಗಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
70 ವರ್ಷದ ಶೆಹಬಾಜ್ ಷರೀಫ್ ಅವರು ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಸಹೋದರ. ಇವರು ಇಮ್ರಾನ್ ಖಾನ್ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಸದ್ಯ ಪ್ರಧಾನಿ ರೇಸ್ನಲ್ಲಿದ್ದಾರೆ. ಇಂದು ರಾಷ್ಟ್ರೀಯ ಅಸೆಂಬ್ಲಿಗೆ ಇಮ್ರಾನ್ ಖಾನ್ ಆಗಮಿಸಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಇಮ್ರಾನ್ ಖಾನ್ ಪದಚ್ಯುತಿ ಖಂಡಿಸಿ ಪಿಟಿಐ ಬೆಂಬಲಿಗರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
(ಇದನ್ನೂ ಓದಿ: ನಾವು ಯಾರನ್ನೂ ಜೈಲಿಗೆ ಹಾಕುವುದಿಲ್ಲ: ಇಮ್ರಾನ್ ಖಾನ್ಗೆ ಪ್ರಧಾನಿ ಆಕಾಂಕ್ಷಿ ಶೆಹಬಾಜ್ ಸಂದೇಶ)