ಪೇಶಾವರ್ (ಪಾಕಿಸ್ತಾನ): ಪೋಲಿಯೋ ವ್ಯಾಕ್ಸಿನ್ ನೀಡುವ ಕಾರ್ಯಕರ್ತರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಬೆಂಗಾವಲು ನೀಡುತ್ತಿದ್ದ ಇಬ್ಬರು ಪೊಲೀಸರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಸದಾ ಉದ್ವಿಗ್ನವಾಗಿರುವ ದಕ್ಷಿಣ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಪ್ರಾಂತ್ಯದ ಟಾಂಕ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ದಾಳಿಯ ನಂತರ ಬಂದೂಕುಧಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಇಡೀ ಪ್ರದೇಶವನ್ನು ಸೀಲ್ ಮಾಡಿ ಆರೋಪಿಗಳ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಈವರೆಗೂ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಗುಂಪು ಹೊತ್ತುಕೊಂಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಪೋಲಿಯೋ ಕಾರ್ಯಕರ್ತರ ಮೇಲೆ ಇಸ್ಲಾಮಿಕ್ ಉಗ್ರಗಾಮಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪೋಲಿಯೋ ಕಾರ್ಯಕರ್ತರಿಗೆ ಶಸ್ತ್ರಸಜ್ಜಿತ ಯೋಧರ ಭದ್ರತೆ ನೀಡಲಾಗಿರುತ್ತದೆ.
ಪೋಲಿಯೋ ಲಸಿಕೆಯು ಪಾಕಿಸ್ತಾನದ ಮಕ್ಕಳು ನಪುಂಸಕರಾಗುವಂತೆ ಮಾಡಲು ಪಾಶ್ಚಿಮಾತ್ಯ ದೇಶಗಳ ಕುತಂತ್ರವಾಗಿದೆ ಎಂದು ಪಾಕಿಸ್ತಾನದ ಉಗ್ರವಾದಿಗಳು ಬಲವಾಗಿ ನಂಬುತ್ತಾರೆ. ಹೀಗಾಗಿ ದೇಶದಲ್ಲಿ ಪೋಲಿಯೋ ಲಸಿಕೆ ನೀಡುವವವರ ಮೇಲೆ ಈ ಉಗ್ರಗಾಮಿಗಳು ಮಾರಣಾಂತಿಕ ದಾಳಿ ನಡೆಸುತ್ತಿರುತ್ತಾರೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಮುಖ್ಯಮಂತ್ರಿ ಮೆಹಮೂದ್ ಖಾನ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.
ವಜಿರಿಸ್ತಾನದಲ್ಲಿ ಈ ವರ್ಷ ನಡೆದ ಎರಡನೇ ಘಟನೆ ಇದಾಗಿದೆ. ಜೂನ್ 28 ರಂದು ದೇಶದ ಉತ್ತರ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯಲ್ಲಿ ಪೋಲಿಯೋ ಲಸಿಕೆ ತಂಡವನ್ನು ಬೆಂಗಾವಲು ಮಾಡುತ್ತಿದ್ದ ಇಬ್ಬರು ಪೊಲೀಸರು ಸೇರಿದಂತೆ ಮೂವರು ಅಪರಿಚಿತ ದಾಳಿಕೋರರಿಂದ ಕೊಲ್ಲಲ್ಪಟ್ಟಿದ್ದರು.
ಈ ವರ್ಷದ ಮಾರ್ಚ್‌ನಲ್ಲಿ, ವಾಯುವ್ಯ ಪಾಕಿಸ್ತಾನದಲ್ಲಿ ಬಂದೂಕುಧಾರಿಗಳು ಮಹಿಳಾ ಪೋಲಿಯೋ ಕಾರ್ಯಕರ್ತೆಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದರು. ಕಳೆದ ವರ್ಷದ ಜನವರಿಯಲ್ಲಿ, ವಾಯುವ್ಯ ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ನಿರ್ವಾಹಕರ ತಂಡಕ್ಕೆ ಭದ್ರತೆ ನೀಡಿದ್ದ ಪೊಲೀಸ್ ಅಧಿಕಾರಿಯನ್ನು ಶಸ್ತ್ರಸಜ್ಜಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪಾಕಿಸ್ತಾನವು ಅಫ್ಘಾನಿಸ್ತಾನದೊಂದಿಗೆ ವಿಶ್ವದ ಕೊನೆಯ ಪೋಲಿಯೋ ರಾಷ್ಟ್ರವಾಗಿ ಉಳಿದಿದೆ. ಈ ವರ್ಷ ಪಾಕಿಸ್ತಾನದಲ್ಲಿ 14 ಪೋಲಿಯೋ ಪ್ರಕರಣಗಳು ವರದಿಯಾಗಿವೆ.