ಪ್ಯಾರಿಸ್ (ಫ್ರೆಂಚ್): ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ವ್ಯಕ್ತಿಯೊಬ್ಬ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ಆಲ್ಪೈನ್ನ ಅನ್ನೆಸಿಯಲ್ಲಿ ಇಂದು (ಗುರುವಾರ) ನಡೆದಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
''ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ಅನ್ನೆಸಿಯ ಪ್ರದೇಶದಲ್ಲಿ ಶಸ್ತ್ರಸಜ್ಜಿತವಾಗಿ ಬಂದಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ಹಲ್ಲೆ ಮಾಡಿ, ಅವರನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಪೊಲೀಸರು ಹಾಗೂ ಭಯೋತ್ಪಾದನಾ ವಿರೋಧಿ ತನಿಖಾಧಿಕಾರಿಗಳು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಭದ್ರತಾ ಪಡೆಗಳಿಂದ ನಡೆದ ಕ್ಷಿಪ್ರ ಕಾರ್ಯಾಚರಣೆಗೆ ಧನ್ಯವಾದಗಳು'' ಎಂದು ಫ್ರಾನ್ಸ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಟ್ವೀಟ್ ಮಾಡಿದ್ದಾರೆ.
ಪೊಲೀಸರ ಪ್ರತಿಕ್ರಿಯೆ: ಗಾಯಗೊಂಡವರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಈ ಪೈಕಿ ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿವೆ. ಉಳಿದ ಇಬ್ಬರು ಮಕ್ಕಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಓರ್ವ ವಯಸ್ಕನಿಗೂ ಗಂಭೀರ ಗಾಯಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''ಆಟದ ಮೈದಾನದಲ್ಲಿ ಮಕ್ಕಳ ಮೇಲೆ ದಾಳಿ ನಡೆಸಲಾಗಿದೆ'' ಎಂದು ಸ್ಥಳೀಯ ಜನಪ್ರತಿನಿಧಿ ಆಂಟೊಯಿನ್ ಅರ್ಮಾಂಡ್ ಟ್ವೀಟ್ ಮಾಡಿದ್ದಾರೆ. ಈ ದಾಳಿಯನ್ನು ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದ್ದಾರೆ.
''ಜನರು ದಿಕ್ಕಾಪಾಲಾಗಿ ಓಡುತ್ತಿದ್ದರು. ಜೋರಾಗಿ ಅಳುತ್ತಿದ್ದರು. ಭಯಭೀತರಾಗಿದ್ದರು. ಈ ದೃಶ್ಯ ಭಯಾನಕವಾಗಿದೆ'' ಎಂದು ನೆಲ್ಲಿ ಎನ್ನುವ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ''ನಾನು ಕೂಡ ಗಾಬರಿಗೊಂಡಿದ್ದೇನೆ. ಮಕ್ಕಳ ಮೇಲೆ ದಾಳಿ ನಡೆಸಿರುವ ಘಟನೆ ತೀವ್ರ ಖಂಡನೀಯ. ನಿವಾಸಿಗಳು ಹಾಗೂ ಪ್ರವಾಸಿಗರು ಇಷ್ಟಪಡುವ ಶಾಂತಿಯುತವಾದ ಸ್ಥಳದಲ್ಲೇ ದುರ್ಘಟನೆಯೊಂದು ನಡೆದಿದ್ದು ಸರಿಯಲ್ಲ'' ಎಂದು ಸಂಸದ ವರ್ಜಿನ್ ಡುಬಿ-ಮುಲ್ಲರ್ ಆತಂಕ ವ್ಯಕ್ತಪಡಿಸಿದರು.
ಅಮೆರಿಕದಲ್ಲಿ ಗುಂಡಿನ ದಾಳಿ, ಇಬ್ಬರು ಸಾವು, ಐವರಿಗೆ ಗಾಯ: ಅಮೆರಿಕದಲ್ಲಿ ಗನ್ ಹೊಂದುವುದರ ಮೇಲೆ ನಿರ್ಬಂಧ ಹೇರಿದ್ದರ ಹೊರತಾಗಿ ಹಲವು ಗುಂಡಿನ ದಾಳಿ ನಡೆದಿವೆ. ಜೂ.6ರಂದು ಕೂಡ ರಿಚ್ಮಂಡ್ನಲ್ಲಿ ಗುಂಡಿನ ಶಬ್ದ ಕೇಳಿ ಬಂದಿತ್ತು. ರಿಚ್‌ಮಂಡ್ ಡೌನ್‌ಟೌನ್‌ನ ವರ್ಜೀನಿಯಾ ಕಾಮನ್‌ವೆಲ್ತ್ ವಿವಿಯ ಬಳಿ ಇಬ್ಬರು ವ್ಯಕ್ತಿಗಳು ನಡೆಸಿದ್ದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಐವರು ಗಾಯಗೊಂಡಿದ್ದರು. ಜೂ.6ರಂದು ಇಲ್ಲಿ ನಡೆದ ಹೈಸ್ಕೂಲ್ ಪದವಿ ಪ್ರದಾನ ಸಮಾರಂಭದ ನಂತರ ರಿಚ್‌ಮಂಡ್ ಡೌನ್‌ಟೌನ್‌ನ ವರ್ಜೀನಿಯಾ ಕಾಮನ್‌ವೆಲ್ತ್ ವಿವಿ ಬಳಿ ದುಷ್ಕರ್ಮಿಗಳು ಇದ್ದಕ್ಕಿದಂತೆ ಗುಂಡಿನ ದಾಳಿ ಮಾಡಿದ್ದರು.
ಈ ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದರು. ಇಬ್ಬರು ಶಂಕಿತರನ್ನು ಅರೆಸ್ಟ್ ಮಾಡಲಾಗಿತ್ತು ಎಂದು ರಿಚ್ಮಂಡ್ ಪೊಲೀಸ್ ಮುಖ್ಯಸ್ಥ ರಿಕ್ ಎಡ್ವರ್ಡ್ಸ್ ತಿಳಿಸಿದ್ದರು.
ಈ ಸುದ್ದಿಗಳನ್ನೂ ಓದಿ:
3 ತಿಂಗಳ ವಿರಾಮದ ನಂತರ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿದ ಕಿಲೌಯಾ ಜ್ವಾಲಾಮುಖಿ!
ಐಸಿಸ್ನಿಂದ ರಾಸಾಯನಿಕ ಅಸ್ತ್ರ ಬಳಕೆ: ವಿಶ್ವಸಂಸ್ಥೆ ತನಿಖಾಧಿಕಾರಿಗಳಿಂದ ಸಾಕ್ಷ್ಯಸಂಗ್ರಹ