ಮಿಲಾನ್ (ಇಟಲಿ) : ಶುಕ್ರವಾರ ಬೆಳಗ್ಗೆ ಇಟಲಿಯ ಮಿಲಾನ್ನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕನಿಷ್ಠ 6 ಜನ ಸಾವನ್ನಪ್ಪಿದ್ದಾರೆ ಮತ್ತು ಡಜನ್ ಗಟ್ಟಲೆ ಜನ ಗಾಯಗೊಂಡಿದ್ದಾರೆ ಎಂದು ಇಟಾಲಿಯನ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಮೃತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಗ್ನಿಶಾಮಕ ದಳದವರ ಪ್ರಕಾರ, ಮಿಲಾನ್‌ನ ದಕ್ಷಿಣದ ವಸತಿ ನೆರೆಹೊರೆಯಲ್ಲಿರುವ 'ಕಾಸಾ ಡೀ ಕೊನಿಯುಗಿ' ವೃದ್ಧಾಶ್ರಮವಿರುವ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ಬೆಳಗಿನ ಜಾವ 1:20 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಹಲವಾರು ಜನರನ್ನು ಕಟ್ಟಡದಿಂದ ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದರು.
ಕಟ್ಟಡದ ಒಂದು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಿಲನ್ ಮೇಯರ್ ಗೈಸೆಪ್ಪೆ ಸಲಾ ಹೇಳಿದರು. ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು. ಅನೇಕರು ಹೊಗೆಯಿಂದ ಉಸಿರಾಡಲಾಗದೇ ಸಾವನ್ನಪ್ಪಿದ್ದಾರೆ ಎಂದು ಮೇಯರ್ ಹೇಳಿದರು. ಕನಿಷ್ಠ 80 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. 14 ಗಂಭೀರವಾಗಿ ಗಾಯಗೊಂಡಿದ್ದರೂ ಇವರಿಗೆ ಯಾವುದೇ ಪ್ರಾಣಾಪಾಯವಿಲ್ಲ. ಸುಮಾರು 65 ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಲೊಂಬಾರ್ಡಿಯ ತುರ್ತು ಸೇವೆ ಮುಖ್ಯಸ್ಥ ಗಿಯಾನ್ಲುಕಾ ಚಿಯೋಡಿನಿ ಹೇಳಿದರು.
ಹೈದರಾಬಾದ್ ಬಳಿ ಫಲಕ್ನುಮಾ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: ತೆಲಂಗಾಣದ ಬೊಮ್ಮಾಯಿಪಲ್ಲಿ ಮತ್ತು ಪಗಿಡಿಪಲ್ಲಿ ಮಧ್ಯೆ ಫಲಕ್ನುಮಾ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ರೈಲನ್ನು ನಿಲ್ಲಿಸಲಾಯಿತು ಮತ್ತು ಎಲ್ಲ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ. ಯಾವುದೇ ಸಾವು ನೋವು ವರದಿಯಾಗಿಲ್ಲ.
ಘಟನೆಯ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಮಧ್ಯ ರೈಲ್ವೆಯ ಸಿಪಿಆರ್ಒ ಸಿಎಚ್ ರಾಕೇಶ್, ಫಲಕ್ನುಮಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ ವರದಿಯಾಗಿದೆ. ಎಸ್ 4, ಎಸ್ 5 ಮತ್ತು S6 ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ರೈಲನ್ನು ಬೊಮ್ಮಾಯಿಪಲ್ಲಿ ಮತ್ತು ಪಗಿಡಿಪಲ್ಲಿ ನಡುವೆ ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಸ್‌ಗೆ ಬೆಂಕಿ: ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 26 ಜನರು ಸಜೀವ ದಹನಗೊಂಡ ಘಟನೆ ಒಂದು ವಾರದ ಹಿಂದೆ ನಡೆದಿದೆ. ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಬಸ್‌ನಲ್ಲಿ ಒಟ್ಟು 33 ಜನರು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಬಸ್ ಯವತ್ಮಾಲ್ ನಿಂದ ಪುಣೆಗೆ ತೆರಳುತ್ತಿತ್ತು. ರಾಜ್ಯದ ಬುಲ್ಧಾನಾ ಜಿಲ್ಲೆಯಲ್ಲಿ ಶನಿವಾರ ನಸುಕಿನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ರೂಪಾಯಿಯ ಅಂತಾರಾಷ್ಟ್ರೀಕರಣ; ಡಾಲರ್ಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ ದೇಸಿ ಕರೆನ್ಸಿ