ಟೋಕಿಯೋ(ಜಪಾನ್): ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಆಯೋಜನೆಗೊಂಡಿದ್ದ ಇಂಡೋ - ಪೆಸಿಫಿಕ್ ಎಕನಾಮಿಕ್ ಫ್ರೇಮ್ವರ್ಕ್ ಫಾರ್ ಪ್ರಾಸ್ಪೆರಿಟಿ(IPEF)ನಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ, ಭಾರತ ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದರು. ಶಾಂತಿ, ಸಮೃದ್ಧಿ ಗುರಿ ಸಾಧಿಸುವ ಉದ್ದೇಶದಿಂದ ಪಾಲುದಾರರ ನಡುವೆ ಉತ್ತಮ ಸಂಬಂಧ ಹೊಂದುವುದಾಗಿ ಹೇಳಿಕೊಂಡಿದ್ದಾರೆ.
ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಸವಾಲು ಎದುರಿಸಲು ಸೃಜನಶೀಲ ಪರಿಹಾರ ಕಂಡು ಹಿಡಿಯುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ನಮೋ, ನಾವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಬದ್ಧವಾಗಿದ್ದು, ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಗೆ ಪಾಲುದಾರರ ನಡುವೆ ಆಳವಾದ ಆರ್ಥಿಕ ಒಪ್ಪಂದ ಹೊಂದಲಿದ್ದೇವೆ ಎಂದರು. ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್ವರ್ಕ್ ಫಾರ್ ಪ್ರಾಸ್ಪೆರಿಟಿ ಅಡಿ ಪಾಲುದಾರ ರಾಷ್ಟ್ರಗಳೊಂದಿಗೆ ಭಾರತ ಸಹಕಾರದೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ ಎಂದರು.
ಇದನ್ನೂ ಓದಿ: ಮೋದಿ, ಮೋದಿ; ಜೈ ಶ್ರೀರಾಮ್... ಟೋಕಿಯೋದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ
ಈ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಕಿಶಿದಾ ಫ್ಯೂಮಿಯೋ ಉಪಸ್ಥಿತರಿದ್ದರು. ಇದರ ಜೊತೆಗೆ ಐಪಿಇಎಫ್ ಪಾಲುದಾರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಬ್ರೂನಿ, ಇಂಡೋನೇಷ್ಯಾ, ರಿಪಬ್ಲಿಕ್ ಆಫ್ ಕೊರಿಯಾ, ಮಲೇಷ್ಯಾ, ನ್ಯೂಜಿಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂದ ಅನೇಕ ಅಧಿಕಾರಿಗಳು, ನಾಯಕರು ಹಾಜರಾಗಿದ್ದರು.
ಅನಿವಾಸಿ ಭಾರತೀಯರನ್ನುದ್ದೇಶಿಸಿ ನಮೋ ಮಾತು: ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್ಗೆ ತೆರಳಿರುವ ನಮೋ, ಇಂದು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ಭಾರತ - ಜಪಾನ್ ನಡುವಿನ ಸಂಬಂಧದ ಬಗ್ಗೆ ಹಾಡಿಹೊಗಳಿದ ನಮೋ, ಸ್ವಾಮಿ ವಿವೇಕಾನಂದರು ಚಿಕಾಗೋಗೆ ತೆರಳುವ ಮೊದಲು ಜಪಾನ್ಗೆ ಭೇಟಿ ನೀಡಿದ್ದರು. ಜೀವನದಲ್ಲಿ ಒಮ್ಮೆಯಾದರೂ ಜಪಾನ್ಗೆ ಭೇಟಿ ನೀಡಬೇಕೆಂದು ಅವರು ಹೇಳಿದ್ದರು ಎಂದರು.
ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಜಪಾನ್ ಪಾಲು ಬಹಳ ಮಹತ್ವದ್ದಾಗಿದೆ ಎಂದ ನಮೋ, ನಾನು ಜಪಾನ್ಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಗುತ್ತದೆ. ಭಾರತದ ಅನೇಕರು ಜಪಾನ್ನಲ್ಲಿ ಉಳಿದುಕೊಂಡು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡಿದ್ದೀರಿ. ಆದರೂ, ಭಾರತದ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಹೆಮ್ಮೆಯ ವಿಚಾರ ಎಂದರು.