ಟೊರೊಂಟೊ : ಭಾರತದ ಕಡೆಯಿಂದ ತನ್ನ ಸರ್ಕಾರಿ ಕಚೇರಿಗಳ ಮೇಲೆ ಸೈಬರ್ ಹ್ಯಾಕಿಂಗ್ ದಾಳಿಗಳು ನಡೆಯುತ್ತಿವೆ ಎಂದು ಕೆನಡಾದ ಸರ್ಕಾರಿ ಸಚಿವಾಲಯಗಳು ಆರೋಪಿಸಿವೆ. ಸರ್ರೆಯಲ್ಲಿ ಜೂನ್ ನಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಕೆನಡಾ-ಭಾರತ ಸಂಬಂಧಗಳು ದಿನೇ ದಿನೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಈ ಆರೋಪ ಮಹತ್ವ ಪಡೆದುಕೊಂಡಿದೆ.
ಈ ದಾಳಿಗಳನ್ನು "ಉಪದ್ರವ" ಎಂದು ಕರೆದ ಕೆನಡಾದ ಸಿಗ್ನಲ್ಸ್-ಇಂಟೆಲಿಜೆನ್ಸ್ ಏಜೆನ್ಸಿ, ಫೆಡರಲ್ ಇಲಾಖೆಗಳು ಮತ್ತು ಏಜೆನ್ಸಿಗಳಲ್ಲಿನ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ ವಿವಿಧ ಸರ್ಕಾರಿ ಸಂಸ್ಥೆಗಳ ಕಾರ್ಯಾಚರಣೆಯ ಮೇಲೆ ಪರಿಣಾಮವಾಗಿದೆ ಎಂದು ಹೇಳಿದೆ. ಕೆನಡಾದ ಸಶಸ್ತ್ರ ಪಡೆಗಳ ವೆಬ್ಸೈಟ್ ಮೇಲೆ ಬುಧವಾರ ನಡೆದ ಸೈಬರ್ ದಾಳಿಯಿಂದ ಗಂಟೆಗಳವರೆಗೆ ಸಮಸ್ಯೆ ಎದುರಾಗಿತ್ತು. "ಸೈಬರ್ ದಾಳಿಗಳಿಂದ ನಮ್ಮ ವ್ಯವಸ್ಥೆಗಳ ಮೇಲೆ ಉಂಟಾಗಿರುವ ವ್ಯಾಪಕ ಪರಿಣಾಮಗಳ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲ" ಎಂದು ಮಿಲಿಟರಿ ವಕ್ತಾರ ಆಂಡ್ರೀ-ಅನ್ನೆ ಪೌಲಿನ್ ಹೇಳಿದರು.
ಬಾಟ್ಗಳು ಅನೇಕ ದಾಳಿಗಳ ಮೂಲಕ ವೆಬ್ಸೈಟ್ಗಳನ್ನು ಸ್ಥಗಿತಗೊಳಿಸಿವೆ ಹಾಗೂ ಈ ಮಾದರಿಯ ದಾಳಿಯನ್ನು ಡಿಸ್ಟ್ರಿಬ್ಯೂಟೆಡ್ ಡಿನೈಯಲ್-ಆಫ್-ಸರ್ವೀಸ್ (ಡಿಡಿಒಎಸ್) ದಾಳಿ ಎಂದು ಕರೆಯಲಾಗುತ್ತದೆ ಎಂದು ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್ ಹೇಳಿದ್ದಾರೆ. "ದುರದೃಷ್ಟವಶಾತ್ ಇಂಥ ದಾಳಿಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಆದರೆ ನಮ್ಮ ಸೈಬರ್ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಿ ಸಮಸ್ಯೆ ಪರಿಹಾರ ಮಾಡಿದ್ದಾರೆ. ಇದು ಒಂದು ಸಣ್ಣ ಸಮಸ್ಯೆಯಾಗಿತ್ತು." ಎಂದು ಅವರು ತಿಳಿಸಿದ್ದಾರೆ.
ಡಿಡಿಒಎಸ್ ದಾಳಿಯಿಂದಾಗಿ ಹೌಸ್ ಆಫ್ ಕಾಮನ್ಸ್ ವೆಬ್ಸೈಟ್ ಮೇಲೂ ಪರಿಣಾಮವಾಗಿದೆ. "ಹೌಸ್ ಆಫ್ ಕಾಮನ್ಸ್ ಸಿಸ್ಟಮ್ಸ್ ನಮ್ಮ ನೆಟ್ವರ್ಕ್ ಮತ್ತು ಐಟಿ ಮೂಲಸೌಕರ್ಯವನ್ನು ರಕ್ಷಿಸಲು ಯೋಜಿಸಿದಂತೆ ಪ್ರತಿಕ್ರಿಯಿಸಿದೆ. ಆದಾಗ್ಯೂ, ಕೆಲವು ವೆಬ್ಸೈಟ್ಗಳು ಅಲ್ಪಾವಧಿಗೆ ಪ್ರತಿಕ್ರಿಯಿಸದಿರಬಹುದು" ಎಂದು ಹೌಸ್ ಆಫ್ ಕಾಮನ್ಸ್ ವಕ್ತಾರೆ ಅಮೆಲಿ ಕ್ರಾಸ್ಸನ್ ಗುರುವಾರ ಹೇಳಿದ್ದಾರೆ. "ಹೌಸ್ ಆಫ್ ಕಾಮನ್ಸ್ ಐಟಿ ತಂಡವು ತಜ್ಞರ ಸಹಯೋಗದೊಂದಿಗೆ ಹಾನಿ ಕಡಿಮೆ ಮಾಡುವ ಕ್ರಮಗಳನ್ನು ಜಾರಿಗೆ ತಂದಿದೆ ಮತ್ತು ಸೇವೆಗಳನ್ನು ಸೂಕ್ತ ಸೇವಾ ಮಟ್ಟಗಳಿಗೆ ಪುನಃಸ್ಥಾಪಿಸಿದೆ. ಐಟಿ ತಂಡವು ನಿರಂತರವಾಗಿ ಅಂತಹ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ : ವಿಶ್ವ ಪ್ರವಾಸೋದ್ಯಮ ದಿನ: ಕಾಂಬೋಡಿಯಾಗೆ ಈ ವರ್ಷ 3.5 ಮಿಲಿಯನ್ ಪ್ರವಾಸಿಗರ ಭೇಟಿ