ಟೆಲ್ ಅವೀವ್: ಗಾಝಾದ ಖಾನ್ ಯೂನಿಸ್ ಪ್ರದೇಶದಲ್ಲಿರುವ ಹಮಾಸ್ ಹಿರಿಯ ನಾಯಕ ಯಾಹ್ಯಾ ಸಿನ್ವರ್ ಮನೆಯನ್ನು ಸುತ್ತುವರೆದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಬುಧವಾರ ತಿಳಿಸಿದೆ. "ನಾವು ಆತನ ಮನೆಯನ್ನು ಸುತ್ತುವರೆದಿದ್ದೇವೆ, ಆದರೆ ಸಿನ್ವರ್ ಇನ್ನೂ ಪತ್ತೆಯಾಗಿಲ್ಲ. ಆತ ತಲೆಮರೆಸಿಕೊಂಡಿದ್ದಾನೆ" ಎಂದು ಐಡಿಎಫ್‌ನ ಉನ್ನತ ಅಧಿಕಾರಿಯೊಬ್ಬರು ಐಎಎನ್ಎಸ್ಗೆ ತಿಳಿಸಿದ್ದಾರೆ.
ಹಮಾಸ್ನ ಉನ್ನತ ನಾಯಕರಾದ ಮೊಹಮ್ಮದ್ ದೀಫ್ ಮತ್ತು ಯಾಹ್ಯಾ ಸಿನ್ವರ್ ದಕ್ಷಿಣ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾರೆ ಎಂದು ಐಡಿಎಫ್ ಹೇಳಿಕೊಂಡಿದೆ. ಸಿನ್ವರ್ ದಕ್ಷಿಣ ಗಾಜಾದ ಹಮಾಸ್ ಸುರಂಗ ಜಾಲದಲ್ಲಿ ಅಡಗಿದ್ದಾನೆ ಎಂದು ಐಡಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ಭೂ ಆಕ್ರಮಣ ಪ್ರಾರಂಭಿಸಿದಾಗಿನಿಂದ ಹಮಾಸ್ನ ಬಹುತೇಕ ಮಧ್ಯಮ ಶ್ರೇಣಿಯ ನಾಯಕರು ಕೊಲ್ಲಲ್ಪಟ್ಟಿದ್ದಾರೆ. ಅಕ್ಟೋಬರ್ 7 ರ ದಾಳಿಯ ನಂತರ ಇಸ್ರೇಲ್ ಆರಂಭಿಸಿರುವ ಯುದ್ಧದಲ್ಲಿ 15,000 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದಾರೆ. ಹಾಗೆಯೇ ಹಮಾಸ್ನಿಂದ 1400 ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ.
ಬಾಂಬ್ ತಯಾರಿಕಾ ಪ್ರಯೋಗಾಲಯ ಪತ್ತೆ: ಮೆನಾಶೆ ಪ್ರಾದೇಶಿಕ ಬ್ರಿಗೇಡ್, ದುವ್ದೇವನ್ ಘಟಕ, ಲೋಟಾರ್ ಮತ್ತು ಬಾರ್ಡರ್ ಪೊಲೀಸ್ನ ಮೀಸಲು ಪಡೆಗಳು ವೆಸ್ಟ್ ಬ್ಯಾಂಕ್ನ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ 10 ವಾಂಟೆಡ್ ಪ್ಯಾಲೆಸ್ಟೈನಿಯರನ್ನು ವಶಕ್ಕೆ ಪಡೆದಿವೆ ಮತ್ತು ಎರಡು ಸುರಂಗ ಶಾಫ್ಟ್ಗಳು ಹಾಗೂ ಮೂರು ಬಾಂಬ್ ತಯಾರಿಕಾ ಪ್ರಯೋಗಾಲಯಗಳನ್ನು ಪತ್ತೆಹಚ್ಚಿವೆ. ಈ ಸ್ಥಳದಿಂದ ಹಲವಾರು ಬಂದೂಕು, ಶಸ್ತ್ರಾಸ್ತ್ರಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ಪ್ಯಾಲೆಸ್ಟೈನ್ ಹೋರಾಟಗಾರರೊಂದಿಗೆ ಸಂಘರ್ಷ ನಡೆಸಿದ್ದು, ಘರ್ಷಣೆಯಲ್ಲಿ ಓರ್ವ ಸೈನಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಮತ್ತೆ 16 ಶಂಕಿತ ಉಗ್ರಗಾಮಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಡಿಎಫ್ ತಿಳಿಸಿದೆ.
ರಾಫಾದಲ್ಲಿ ಹೋರಾಟ ತಾತ್ಕಾಲಿಕ ಸ್ಥಗಿತ: ಮಾನವೀಯ ಪರಿಹಾರದ ಪೂರೈಕೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಫಾ ಜಿಲ್ಲೆಯ ಅಶ್ ಶಬೌರಾ ಪ್ರದೇಶದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಹೋರಾಟ ಸ್ಥಗಿತಗೊಳಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಬುಧವಾರ ತಿಳಿಸಿದೆ. ಆದರೆ ಖಾನ್ ಯೂನಿಸ್ನ ಸಲಾಹ್ ಅಲ್-ದಿನ್ ರಸ್ತೆಯ ಕೆಲವು ಭಾಗಗಳಲ್ಲಿ ಘರ್ಷಣೆ ಮುಂದುವರೆದಿರುವುದರಿಂದ ಆ ರಸ್ತೆಯ ಮೂಲಕ ಪರಿಹಾರ ಸಾಮಗ್ರಿಗಳನ್ನು ಸಾಗಿಸಕೂಡದು ಎಂದು ಐಡಿಎಫ್ ವಕ್ತಾರ ಅವಿಚೈ ಅಡ್ರೈ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇದನ್ನೂ ಓದಿ: ಹಮಾಸ್ ಉಗ್ರರಿಂದ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನವಾಗಿರುವುದೇಕೆ ವಿಶ್ವಸಮುದಾಯ?; ನೆತನ್ಯಾಹು ಪ್ರಶ್ನೆ