ಥಾಯ್ಲೆಂಡ್: ತನ್ನ ಹೆಂಡತಿ ₹2.9 ಕೋಟಿ ಮೌಲ್ಯದ ಲಾಟರಿ ಗೆದ್ದು ಬೇರೊಬ್ಬನ ಜೊತೆ ಮದುವೆಯಾಗಿದ್ದಾಳೆ ಎಂದು ತಿಳಿದು ಆಘಾತಕ್ಕೊಳಗಾದ ಪತಿ ಪೊಲೀಸರಿಗೆ ದೂರು ನೀಡಿದ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ. ಥೈಗರ್ ಸುದ್ದಿ ಮಾಧ್ಯಮದ ವರದಿ ಪ್ರಕಾರ, ಥಾಯ್ಲೆಂಡ್ನ ನರಿನ್ ಎಂಬಾತ ಕಳೆದ 20 ವರ್ಷಗಳ ಹಿಂದೆ ಚವೀವಾನ್ ಎಂಬಾಕೆಯನ್ನು ಮದುವೆಯಾಗಿದ್ದನು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ನರಿನ್ ಸಾಲ ಮಾಡಿಕೊಂಡಿದ್ದರಿಂದ ಮೊತ್ತ ಮರುಪಾವತಿಸುವ ಉದ್ದೇಶದಿಂದ ಉದ್ಯೋಗಕ್ಕಾಗಿ ದಕ್ಷಿಣ ಕೊರಿಯಾಗೆ ತೆರಳಲು ನಿರ್ಧರಿಸಿದ್ದ. 2014ರಲ್ಲಿ ದಕ್ಷಿಣ ಕೊರಿಯಾಗೆ ತೆರಳಿದ್ದ ಆತ ಅಲ್ಲಿ ದುಡಿದು ತನ್ನ ಕುಟುಂಬವನ್ನು ಸಾಕುತ್ತಿದ್ದನು.
ಈ ಸಂದರ್ಭದಲ್ಲಿ ತನ್ನ ಮಕ್ಕಳನ್ನು ನೋಡಿಕೊಳ್ಳಲು ತನ್ನ ಹೆಂಡತಿಯನ್ನು ನರಿನ್ ಥಾಯ್ಲೆಂಡ್‌ಗೆ ಕಳುಹಿಸಿದ್ದಾನೆ. ಅಲ್ಲಿ ಕುಟುಂಬ ನಿಭಾಯಿಸಲು ಬೇಕಾದ ಹಣವನ್ನು ಪ್ರತೀ ತಿಂಗಳು ಹೆಂಡತಿಗೆ ಕಳುಹಿಸಿಕೊಡುತ್ತಿದ್ದ. ಈ ನಡುವೆ ನರಿನ್ಗೆ ತನ್ನ ಹೆಂಡತಿ 2.9 ಕೋಟಿ ಮೌಲ್ಯದ ಲಾಟರಿ ಗೆದ್ದಿರುವ ಬಗ್ಗೆ ಗೊತ್ತಾಗಿದೆ. ಆದರೆ ಪತ್ನಿ ಈ ಸಂಗತಿಯನ್ನು ಮರೆಮಾಚಿದ್ದು, ಅನುಮಾನ ಬಂದಿದೆ.
ಹೀಗಾಗಿ ನರಿನ್ ಮಾರ್ಚ್ 3ರಂದು ದಕ್ಷಿಣ ಕೊರಿಯಾದಿಂದ ಥಾಯ್ಲೆಂಡ್‌ಗೆ ವಾಪಸ್ ಆಗಿದ್ದಾನೆ. ಈ ವೇಳೆ ಪತ್ನಿಗೆ ಕರೆ ಮಾಡಿದ್ದು, ಆಕೆ ಸ್ವೀಕರಿಸಿಲ್ಲ. ಪತ್ನಿಯನ್ನು ಹುಡುಕಿಕೊಂಡು ಹೋದ ನರಿನ್ಗೆ ಆಕೆ ಇನ್ನೊಂದು ಮದುವೆಯಾಗಿರುವುದು ತಿಳಿದುಬಂದಿದೆ. ಫೆಬ್ರವರಿ 25ರಂದು ಪತ್ನಿ ಚವೀವಾನ್, ಪೊಲೀಸ್ ಅಧಿಕಾರಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿ ನರಿನ್ ಆಘಾತಕ್ಕೊಳಗಾಗಿದ್ದಾನೆ. ತನಗೆ ಮೋಸ ಮಾಡಿದ ಪತ್ನಿ ವಿರುದ್ಧ ನರಿನ್ ಮಾರ್ಚ್ 11ರಂದು ಕೇಸು ದಾಖಲಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನರಿನ್, "ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ, ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಹೆಂಡತಿ ನನಗೆ ಹೀಗೆ ಮಾಡುತ್ತಾಳೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆಕೆಯ ಖಾತೆಗೆ ಪ್ರತೀ ತಿಂಗಳು ಹಣ ಕಳುಹಿಸಿದ್ದೆ. ನಾನು ನ್ಯಾಯಕ್ಕಾಗಿ ಮತ್ತು ನನಗೆ ನೀಡಬೇಕಾದ ಹಣ ಕೊಡುವಂತೆ ಆಗ್ರಹಿಸುತ್ತೇನೆ" ಎಂದು ಹೇಳಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ನರಿನ್ ಪತ್ನಿ, ಲಾಟರಿ ಗೆದ್ದು ನಾನು ನನ್ನ ಪ್ರಿಯಕರನನ್ನು ಮದುವೆಯಾಗುವುದಕ್ಕಿಂತಲೂ ಮುಂಚೆಯೇ ನಮ್ಮಿಬ್ಬರ ಸಂಬಂಧ ಮುರಿದುಬಿದ್ದಿದೆ ಎಂದು ಹೇಳಿದ್ದಾಳೆ. ಆದರೆ ನರಿನ್ ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾನೆ. ಸದ್ಯ ನರಿನ್ ತನ್ನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಸರ್ಕಾರಿ ಕಚೇರಿಯಲ್ಲಿ ಲಾಡೆನ್ ಭಾವಚಿತ್ರ ಹಾಕಿ, ಮೆಚ್ಚುಗೆ: ಎಂಜಿನಿಯರ್ ವಜಾ