ವಾಷಿಂಗ್ಟನ್(ಯುಎಸ್ಎ): ದಿಢೀರ್ ಹವಾಮಾನ ಬದಲಾವಣೆ ಪರಿಣಾಮ ಶುಕ್ರವಾರ ಮುಂಜಾನೆಯಿಂದ ಶನಿವಾರದವರೆಗೆ ಯುನೈಟೆಡ್ ಸ್ಟೇಟ್ಸ್‌ನ ದಕ್ಷಿಣ ಮತ್ತು ಮಧ್ಯಪಶ್ಚಿಮ ಭಾಗಗಳಲ್ಲಿ ಅಪಾಯಕಾರಿ ಚಂಡಮಾರುತ ಮತ್ತು ಭೀಕರ ಸುಂಟರಗಾಳಿ ಅಪ್ಪಳಿಸಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಇಲಿನಾಯ್ಸ್ ಪ್ರದೇಶದಲ್ಲಿ ನಾಲ್ವರು ಅಸುನೀಗಿದ್ದಾರೆ.
ರಾಷ್ಟ್ರೀಯ ಹವಾಮಾನ ಸೇವೆಯ ಚಂಡಮಾರುತ ಮುನ್ಸೂಚನೆ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಹವಾಮಾನ ವೈಪರೀತ್ಯ ಕಾರಣದಿಂದ ಶುಕ್ರವಾರ ಮತ್ತು ಶನಿವಾರದಂದು ರಾಜ್ಯಾದ್ಯಂತ 60 ಕ್ಕೂ ಹೆಚ್ಚು ಕಡೆ ಸುಂಟರಗಾಳಿ ಬೀಸಿರುವ ಕುರಿತು ವರದಿಯಾಗಿದೆ. ಶುಕ್ರವಾರ ಮಧ್ಯಾಹ್ನ ಅರ್ಕಾನ್ಸಾಸ್‌ನ ಲಿಟಲ್ ರಾಕ್ ಮತ್ತು ಇತರೆಡೆ ಸುಂಟರಗಾಳಿ ಬಂದಪ್ಪಳಿಸಿದ್ದು, ಮನೆಗಳನ್ನು ಹಾನಿಗೊಳಿಸಿದೆ.
ಅರ್ಕಾನ್ಸಾಸ್ ಡಿಪಾರ್ಟ್‌ಮೆಂಟ್ ಆಫ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ನ ವಕ್ತಾರರಾದ ಲಾತ್ರೇಶಾ ವುಡ್ರಫ್ ಅವರು ಮಾಹಿತಿ ನೀಡಿ, ಕ್ರಾಸ್ ಕೌಂಟಿಯ ಲಿಟಲ್ ರಾಕ್‌ನ ಈಶಾನ್ಯ ಭಾಗದಲ್ಲಿ ಬೀಸಿದ ಸುಂಟರಗಾಳಿಯು ನಾಲ್ಕು ಜನರನ್ನು ಬಲಿ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಅಕ್ಕಪಕ್ಕದ ಪಟ್ಟಣಗಳು ಸಹ ನಲುಗಿವೆ. ವೈನ್ನೆಯಲ್ಲಿ ಪ್ರೌಢಶಾಲೆ ಸೇರಿದಂತೆ ವ್ಯಾಪಾರ ಮಳಿಗೆಗಳಿಗೆ ವ್ಯಾಪಕ ಹಾನಿ ಉಂಟು ಮಾಡಿದೆ. ಕೆಲವು ಮನೆಗಳು ಧರೆಗುರುಳಿವೆ. ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಇದನ್ನೂ ಓದಿ: ಮಲಾವಿಯಲ್ಲಿ ಭೀಕರ ಚಂಡಮಾರುತ: ಸಾವಿನ ಸಂಖ್ಯೆ 1,000 ಗಡಿ ದಾಟುವ ಸಾಧ್ಯತೆ
ಅರ್ಕಾನ್ಸಾಸ್‌ನಲ್ಲಿ ಭೀಕರ ಸುಂಟರಗಾಳಿ ಕುರಿತು ಮಾಹಿತಿ ಹೊರಬೀಳುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನ ರಾಜ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಉತ್ತರ ಲಿಟಲ್ ರಾಕ್‌ನಲ್ಲಿ ಒಬ್ಬರು ಮತ್ತು ವೈನ್ನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉತ್ತರ ಇಲಿನಾಯ್ಸ್‌ನ ಬೆಲ್ವಿಡೆರೆಯಲ್ಲಿನ ಥಿಯೇಟರ್‌ನಲ್ಲಿ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಥಿಯೇಟರ್‌ನಲ್ಲಿ ಒಟ್ಟು 260 ಜನರಿದ್ದರು. ಈ ಪೈಕಿ 28 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲ್ಲಿವಾನ್ ಕಂಟ್ರಿ, ಇಂಡಿನಲ್ಲಿ, ಶೆರ್ಮನ್‌ನ ಪೂರ್ವಕ್ಕೆ ಸರಿಸುಮಾರು 150 ಮೈಲುಗಳಷ್ಟು ದೂರ ಸುಂಟರಗಾಳಿ ಬೀಸಿದ್ದು, ಈ ಭಾಗದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರ: 18 ಮಂದಿ ಬಲಿ-ವಿಮಾನ ಸಂಚಾರ ರದ್ದು
ಅರ್ಕಾನ್ಸಾಸ್, ಇಲಿನಾಯ್ಸ್, ಇಂಡಿಯಾನಾ ಮತ್ತು ಟೆನ್ನೆಸ್ಸೀ ಮಾತ್ರವಲ್ಲದೇ ವಿಸ್ಕಾನ್ಸಿನ್, ಅಯೋವಾ ಮತ್ತು ಮಿಸ್ಸಿಸ್ಸಿಪ್ಪಿಯಾದ್ಯಂತ ಸುಂಟರಗಾಳಿ ಭಾರಿ ನಷ್ಟ ಉಂಟುಮಾಡಿದೆ. ಜೊತೆಗೆ, ಅಲಬಾಮಾ ಮತ್ತು ಜಾರ್ಜಿಯಾದ ಭಾಗಗಳಿಗೆ ಸಹ ಎಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ವಾರ ಅಮೆರಿಕದ ದಕ್ಷಿಣ ರಾಜ್ಯ ಮಿಸಿಸಿಪ್ಪಿಯ ರೋಲಿಂಗ್ ಫೋರ್ಕ್ನಲ್ಲಿ ಬೀಸಿದ ಸುಂಟರಗಾಳಿಗೆ 25 ಮಂದಿ ಮೃತಪಟ್ಟಿದ್ದರು. ಅಪಾರ ಪ್ರಮಾಣ ಹಾನಿ ಕೂಡ ಸಂಭವಿಸಿತ್ತು. ಅಂದಾಜು ಗರಿಷ್ಠ 170 mph ವೇಗದಲ್ಲಿ ಗಾಳಿ ಬೀಸಿತ್ತು.
ಇದನ್ನೂ ಓದಿ : ಚಂಡಮಾರುತದಿಂದ ತತ್ತರಿಸಿದ ನ್ಯೂಜಿಲ್ಯಾಂಡ್ಗೆ ಭೂಕಂಪದ ರೂಪದಲ್ಲಿ ಮತ್ತೊಂದು ಹೊಡೆತ