ಕರಾಚಿ: ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಪಾಕಿಸ್ತಾನದ ಹಿಂದುಳಿದ ಮತ್ತು ಚಿಕ್ಕ ಜಿಲ್ಲೆಯಾಗಿರುವ ಜಕುಬಾಬಾದ್‌ನಲ್ಲಿ ಹಿಂದೂ ಮಹಿಳೆಯೊಬ್ಬರು ಉನ್ನತ ಮಟ್ಟದ ಪೊಲೀಸ್ ಹುದ್ದೆ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೆ, ಇವರು ಪಾಕಿಸ್ತಾನದಲ್ಲಿ ಡಿಎಸ್ಪಿ ಶ್ರೇಯಾಂಕದ ಹುದ್ದೆಗೇರಿದ ದೇಶದ ಮೊದಲ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮಹಿಳೆಯೂ ಹೌದು.
ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಮಹಿಳೆಯರು ಉನ್ನತ ಹುದ್ದೆ ಪಡೆಯುವುದು ಅತ್ಯಂತ ಕಷ್ಟಕರ. ಆದರಲ್ಲೂ ಪೊಲೀಸ್ ಇಲಾಖೆಯಂತಹ ಕೆಲಸವನ್ನು ಇಲ್ಲಿ ಪುರುಷರಿಗೆಂದೇ ಪರಿಗಣಿಸಲಾಗುತ್ತದೆ. ಆದ್ರೆ, 26 ವರ್ಷದ ಮನಿಷಾ ರೋಪೇಟಾ ಮಾತ್ರ ಛಲ ಬಿಡದೇ ತಮ್ಮ ಸಾಧನೆಯ ಗುರಿ ತಲುಪಿದ್ದಾರೆ. ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಇವರು ಡಿಎಸ್ಪಿ ಆಗುವ ಮೂಲಕ ಮಾದರಿಯಾಗಿದ್ದಾರೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಡಿಎಸ್ಪಿ ರೋಪೇಟಾ, "ಬಾಲ್ಯದಿಂದಲೂ ನಾನು ಮತ್ತು ನನ್ನ ಸಹೋದರಿಯರು ಅದೇ ಹಳೆಯ ವ್ಯವಸ್ಥೆಯನ್ನು ನೋಡಿಕೊಂಡು ಬೆಳೆದಿದ್ದೇವೆ. ಹುಡುಗಿಯರು ಶಿಕ್ಷಣ ಪಡೆಯಲು ಮತ್ತು ಕೆಲಸ ಮಾಡಲು ಬಯಸಿದರೆ ಸೂಕ್ತ ಪ್ರೋತ್ಸಾಹ ದೊರೆಯುವುದಿಲ್ಲ. ಕಲವೇ ಕೆಲವರು ಶಿಕ್ಷಕರಾಗಿ, ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕುಟುಂಬದ ಹುಡುಗಿಯರು ಪೊಲೀಸ್ ಅಥವಾ ಜಿಲ್ಲಾ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸಬಾರದು ಎಂಬ ಮನೋಭಾವವನ್ನು ಕೊನೆಗೊಳಿಸಲು ಪ್ರಯತ್ನಿಸಬೇಕು" ಎಂದು ಸಲಹೆ ನೀಡಿದರು.
"ನಮ್ಮ ಸಮಾಜದಲ್ಲಿ ಮಹಿಳೆಯರು ಹೆಚ್ಚು ತುಳಿತಕ್ಕೊಳಗಾಗಿದ್ದಾರೆ. ನಮಗೆ 'ರಕ್ಷಕ' ಮಹಿಳೆಯರು ಬೇಕು. ಹಾಗಾಗಿ, ಸಿಂಧ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ನಡೆಸಿದೆ. 468 ಅಭ್ಯರ್ಥಿಗಳಲ್ಲಿ 16 ನೇ ಸ್ಥಾನ ಪಡೆದು ಉತ್ತೀರ್ಣಳಾಗುವ ಮೂಲಕ ಪೊಲೀಸ್ ಇಲಾಖೆ ಸೇರಿಕೊಂಡಿದ್ದೇನೆ. ನಾನು ಪೊಲೀಸ್ ಪಡೆಯಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಬಯಸುತ್ತೇನೆ" ಎಂದು ಹೇಳಿದರು.
ಮನಿಷಾ ರೋಪೇಟಾ ಅವರ ಮೂವರು ಸಹೋದರಿಯರು ವೈದ್ಯರಾಗಿದ್ದು, ಕಿರಿಯ ಸಹೋದರ ಕೂಡ ವೈದ್ಯಕೀಯ ಕೋರ್ಸ್ ಓದುತ್ತಿದ್ದಾರೆ. ರೋಪೇಟಾ ಅವರ ತಂದೆ ಜಾಕೋಬಾಬಾದ್‌ನಲ್ಲಿ ವ್ಯಾಪಾರಿಯಾಗಿದ್ದರು. ಮನಿಷಾ 13 ವರ್ಷದವರಾಗಿದ್ದಾಗ ಅವರು ನಿಧನರಾಗಿದ್ದು, ತಾಯಿಯೇ ಮಕ್ಕಳನ್ನು ಕರಾಚಿಗೆ ಕರೆತಂದು ಬೆಳೆಸಿದರು.
ಇದನ್ನೂ ಓದಿ: ಐಎಎಸ್ ಅಧಿಕಾರಿ ಮಂಜುನಾಥ್ ಜಾಮೀನು ಅರ್ಜಿ: ಆಕ್ಷೇಪಣೆ ಸಲ್ಲಿಸಲು ಎಸಿಬಿಗೆ ಹೈಕೋರ್ಟ್ ಆದೇಶ