ಕೀವ್(ಉಕ್ರೇನ್): ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಮುಂದುವರೆಸಿದೆ. ದಕ್ಷಿಣ ಉಕ್ರೇನಿಯನ್ ನಗರವಾದ ಖೆರ್ಸನ್‌ನಲ್ಲಿರುವ ರಷ್ಯಾದ ದೂರದರ್ಶನ ಗೋಪುರದ ಬಳಿ ಬುಧವಾರ ತಡರಾತ್ರಿ ಸರಣಿ ಸ್ಫೋಟ ಸಂಭವಿಸಿದೆ ಎಂದು ಉಕ್ರೇನ್ ಮತ್ತು ರಷ್ಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ರಷ್ಯಾದ ರಾಜ್ಯ ಸುದ್ದಿ ಸಂಸ್ಥೆಯಾದ ಆರ್ಐಎ ನೊವೊಸ್ಟಿ ಈ ಕುರಿತು ವರದಿ ಮಾಡಿದ್ದು, ಉಕ್ರೇನಿಯನ್ ಪಡೆಗಳು ವಾಯವ್ಯ ದಿಕ್ಕಿನಿಂದ ದೂರದರ್ಶನ ಗೋಪುರದ ಮೇಲೆ ಕ್ಷಿಪಣಿಗಳು ಮತ್ತು ರಾಕೆಟ್‌ಗಳ ದಾಳಿ ನಡೆಸಿವೆ ಎಂದು ಉಲ್ಲೇಖಿಸಲಾಗಿದೆ.
ಯುದ್ಧದ ಆರಂಭದಿಂದಲೂ ಖೆರ್ಸನ್ ನಗರ ರಷ್ಯಾದ ಪಡೆಗಳ ವಶದಲ್ಲಿದ್ದು, ಆನ್ಲೈನ್ ಪತ್ರಿಕೆಯಾದ ಉಕ್ರೇಯಿನ್ಸ್ಕಾ ಪ್ರಾವ್ಡಾ ಪ್ರಕಾರ ದಾಳಿಯಿಂದ ಸಾಕಷ್ಟು ಪ್ರಮಾಣದಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ರಷ್ಯಾದ ದೂರದರ್ಶನ ಚಾನೆಲ್‌ಗಳನ್ನು ಹಾನಿಗೊಳಗಾಗಿವೆ ಎನ್ನಲಾಗಿದೆ. ಈ ದಾಳಿಯ ನಂತರ ಸ್ವಲ್ಪ ಸಮಯ ಚಾನೆಲ್ ಪ್ರಸಾರ ಸ್ಥಗಿತಗೊಂಡಿದ್ದು, ನಂತರ ಸ್ವಲ್ಪ ಸಮಯದಲ್ಲಿ ಪುನಾರಂಭವಾಗಿದೆ ಎಂದು ಆರ್ಐಎ ನೊವೊಸ್ಟಿ ಹೇಳಿದೆ.
ರಷ್ಯಾದ ಕೆಲವು ಚಾನೆಲ್‌ಗಳು ಕಳೆದ ವಾರ ಖೆರ್ಸನ್‌ನಿಂದ ಪ್ರಸಾರವನ್ನು ಪ್ರಾರಂಭಿಸಿವೆ. ಖೇರ್ಸನ್ ನಗರದ ಮೇಲೆ ತನ್ನ ನಿಯಂತ್ರಣವನ್ನು ಬಲಪಡಿಸಲು ರಷ್ಯಾ ನಿರ್ಧರಿಸಿದೆ. ಆದರೆ, ಅಲ್ಲಿನ ನಿವಾಸಿಗಳು ರಷ್ಯಾದ ಆಕ್ರಮಣವನ್ನು ಪ್ರತಿಭಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮುಂದಿನ ತಿಂಗಳು ಕ್ವಾಡ್ ಶೃಂಗಸಭೆಯಲ್ಲಿ ಮೋದಿ - ಬೈಡನ್ ಭೇಟಿ: ಶ್ವೇತಭವನ