ಕೊಲಂಬೊ: ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ದ್ವೀಪ ದೇಶ ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ಧನೆ ನೇಮಕಗೊಂಡಿದ್ದಾರೆ. ಕೊಲಂಬೊದ ಫ್ಲವರ್ ರಸ್ತೆಯಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ದೇಶದ 8ನೇ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರವಹಿಸಿದ ಮರುದಿನವೇ ಪ್ರಧಾನಿಯ ಆಯ್ಕೆ ನಡೆದಿದೆ.
1948ರಲ್ಲಿ ಸ್ವಾತಂತ್ರ್ಯ ಪಡೆದ ನಂತರದಲ್ಲಿ ದೇಶ ಇದೀಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇಂದಿನ ದುಸ್ಥಿತಿಗೆ ಕೋವಿಡ್ ಸಾಂಕ್ರಾಮಿಕವೂ ಕಾರಣವಾಗಿದೆ. ತೈಲ ಪೂರೈಕೆಯ ಕೊರತೆಯಿಂದಾಗಿ ಮುಂದಿನ ಸೂಚನೆಯತನಕ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚುವಂತೆ ಈಗಾಗಲೇ ಆದೇಶಿಸಲಾಗಿದೆ. ದೇಶೀಯ ಕೃಷಿ ಉತ್ಪಾದನೆ ಕುಸಿತ, ವಿದೇಶಿ ವಿನಿಮಯ ಸಂಗ್ರಹ ಕುಸಿತ ಮತ್ತು ಸ್ಥಳೀಯ ಕರೆನ್ಸಿಯ ಕುಸಿತದಿಂದಾಗಿ ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದೆ.
ದಿನೇಶ್ ಗುಣವರ್ಧನೆ ಯಾರು?: ದಿನೇಶ್‌ಚಂದ್ರ ರೂಪಸಿಂಘೆ ಗುಣವರ್ಧನೆ ಸಂಸತ್ ಸದಸ್ಯರಾಗಿ, ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1983ರಿಂದ ಎಡಪಂಥೀಯ ಮಹಾಜನ್ ಏಕತಾ ಪೆರಮುನ (MEP) ಪಕ್ಷದ ನಾಯಕ ಕೂಡಾ ಹೌದು.
ಪ್ರತಿಭಟನಾಕಾರ ಮೇಲೆ ಕಠಿಣ ಕ್ರಮ: ವಿಕ್ರಮಸಿಂಘೆ ಅಧ್ಯಕ್ಷರಾದ ನಂತರ ಇದೀಗ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮವೂ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಅಧ್ಯಕ್ಷರ ಕಚೇರಿಯ ಹೊರಗೆ ಬೀಡುಬಿಟ್ಟಿದ್ದ ಪ್ರತಿಭಟನಾಕಾರರನ್ನು ಹೊರ ಹಾಕುವ ಕೆಲಸ ಶುರುವಾಗಿದೆ. ಹಿಂಸಾತ್ಮಕವಾಗಿ ಪ್ರತಿಭಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಕ್ರಮಸಿಂಘೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ