ಶಾಂಘೈ(ಚೀನಾ): ಕೊರೊನಾ ಬಗ್ಗೆ ಶೂನ್ಯ ಸಹಿಷ್ಟುತೆ ಅನುಸರಿಸುತ್ತಿರುವ ಚೀನಾ ತನ್ನ ಪ್ರಜೆಗಳನ್ನು ಇನ್ನಿಲ್ಲಿದಂತೆ ಕೊರೊನಾ ಟೆಸ್ಟ್ಗೆ ಒಳಪಡಿಸಿ, ಕಟ್ಟುನಿಟ್ಟಿನ ನಿರ್ಬಂಧಗಳನ್ನು ಕೈಗೊಂಡಿದೆ. ಆದರೂ ಆ ದೇಶದಲ್ಲಿ ಕೊರೊನಾ ಹಾವಳಿ ನಿಂತಿಲ್ಲ. ಈ ಮಧ್ಯೆ ಕೊರೊನಾ ಪಾಸಿಟಿವ್ ಬಂದರೆ ಅಂಥವರನ್ನು ಐಸೋಲೇಟ್ ಮಾಡುತ್ತಿರುವ ಚೀನಾ, ನೆಗೆಟಿವ್ ಬಂದರೂ ಶಿಕ್ಷೆ ವಿಧಿಸುತ್ತಿದೆ. ನೆಗೆಟಿವ್ ಬಂದವರನ್ನು ಶಾಂಘೈ ನಗರದಿಂದಲೇ ಹೊರ ಕಳುಹಿಸಲಾಗುತ್ತಿದೆ.
ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಆರ್ಥಿಕ ರಾಜಧಾನಿಯಾದ ಶಾಂಘೈ ನಗರದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವುದನ್ನು ತಡೆಯಲು ಮುಂದಾಗಿರುವ ಚೀನಾ ನಗರದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಿದೆ. ಈ ವೇಳೆ ನೆಗೆಟಿವ್ ಕಂಡುಬರುವ ವ್ಯಕ್ತಿಗಳನ್ನು ಸಾಮೂಹಿಕವಾಗಿ ನಗರದಿಂದಲೇ ಗಡಿಪಾರು ಮಾಡಲಾಗುತ್ತಿದೆ. ಅವರಿಗೆ ಮತ್ತೆ ಸೋಂಕು ತಾಕಬಾರದು ಎಂಬ ಕಾರಣಕ್ಕಾಗಿ ಈ ರೀತಿ ಮಾಡಲಾಗುತ್ತಿದೆ.
ಶಾಂಘೈನಲ್ಲಿನ ಜನರಿಗೆ ನೆಗೆಟಿವ್ ಬಂದವರನ್ನು ನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲಿ ಸರ್ಕಾರ ನಿರ್ಮಾಣ ಮಾಡಿರುವ ಕೇಂದ್ರಗಳಿಗೆ ಅವರನ್ನು ರವಾನೆ ಮಾಡಲಾಗುತ್ತಿದೆ. ಇದು ಅಲ್ಲಿಯ ಜನರನ್ನು ಹೈರಾಣು ಮಾಡಿದ್ದು, ಸೋಂಕಿನ ಪಾಸಿಟಿವ್ ಅಲ್ಲದೇ ನೆಗೆಟಿವ್ ಬಂದರೂ ಕಷ್ಟ ಎಂಬಂತಾಗಿದೆ.
400 ಕಿಮೀ ದೂರ ಸಾಗಣೆ: ನಾವು ಇಲ್ಲಿದ್ದರೆ ವೈರಸ್ ಸೋಂಕಿಗೆ ಒಳಗಾಗುವ ಕಾರಣಕ್ಕಾಗಿ ನಗರವನ್ನು ತೊರೆಯಲು ತಿಳಿಸಲಾಯಿತು. ಮಧ್ಯರಾತ್ರಿಯಲ್ಲಿ ನನ್ನ ಜೊತೆಗೆ ಹಲವಾರು ಜನರನ್ನು 400 ಕಿಲೋಮೀಟರ್ ದೂರದಲ್ಲಿರುವ ಕೇಂದ್ರಕ್ಕೆ ಕಳುಹಿಸಲಾಯಿತು. ಇಲ್ಲಿನ ಕ್ಯಾಬಿನ್ ತರಹದ ಕೊಠಡಿಗಳಲ್ಲಿ ನಮ್ಮನ್ನು ಇರಿಸಲಾಗಿದೆ. ಇಲ್ಲಿಂದ ಯಾವಾಗ ಮನೆಗೆ ಹೋಗುತ್ತೇವೋ ಗೊತ್ತಿಲ್ಲ. ಆದರೆ, ನಮಗೆ ಬೇರೆ ಅವಕಾಶವೇ ಇಲ್ಲ. ನಾನು ಶಾಂಘೈ ಸರ್ಕಾರವನ್ನು ನಂಬುವುದಿಲ್ಲ ಎಂದು ಲೂಸಿ ಎಂಬುವವರು ಅಳಲು ತೋಡಿಕೊಂಡಿದ್ದಾರೆ.
ಮೂರು ಹಂತದ ಲಾಕ್‌ಡೌನ್: ಕೆಲವು ದಿನಗಳಿಂದ ಶಾಂಘೈನಲ್ಲಿ ಸಾವಿರಾರು ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಅಧಿಕೃತ ಅಂಕಿ-ಅಂಶಗಳ ಪ್ರಕಾರ 7 ಸಾವಿರ ಹೊಸ ಕೇಸ್, 32 ಸಾವುಗಳು ಸಂಭವಿಸಿವೆ. ವೈರಸ್ ಹರಡುವುದನ್ನು ತಡೆಯಲು ಶಾಂಘೈನಲ್ಲಿ ಮೂರು ಹಂತದ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ಬೀಜಿಂಗ್ನಲ್ಲೂ ನಿರ್ಬಂಧ: ಜನರು ತಮ್ಮ ಮನೆಯ ಕಾಂಪೌಂಡ್‌ನಿಂದ ಹೊರಬರದಂತೆ ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ಬೀಜಿಂಗ್‌ನಲ್ಲಿ ವೈರಸ್ ಹರಡುತ್ತಿದೆ. ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುವುದನ್ನೂ ನಿಷೇಧಿಸಲಾಗಿದೆ. ಒಂದೇ ಒಂದು ಪ್ರಕರಣ ಬೆಳಕಿಗೆ ಬಂದರೂ ಆ ಮನೆಗಳು ಮತ್ತು ಕಟ್ಟಡಗಳನ್ನು ಸೀಲ್ ಮಾಡಲಾಗುತ್ತಿದೆ.
ಓದಿ: ಮಹಾ ಆರತಿ ರದ್ದು : ಈದ್ ಹಬ್ಬಕ್ಕೆ ತೊಂದರೆ ಕೊಡಬಾರದು ಎಂದ ರಾಜ್ ಠಾಕ್ರೆ