ಬೀಜಿಂಗ್(ಚೀನಾ): ಗಡಿ ಮತ್ತು ನ್ಯಾಟೋ ಸೇರ್ಪಡೆ ವಿಷಯವಾಗಿ ಈಗಾಗಲೇ ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ನಡೆಯುತ್ತಿದೆ. ಇದೀಗ ಚೀನಾ ಮತ್ತು ಅಮೆರಿಕಾ ಮಧ್ಯೆ ಯುದ್ಧದ ಮಾತುಗಳು ಹೊರಬಿದ್ದಿವೆ. ಅದೂ ತೈವಾನ್ ಎಂಬ ಪುಟ್ಟ ದ್ವೀಪ ರಾಷ್ಟ್ರಕ್ಕಾಗಿ.
ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ತೈವಾನ್ ಚೀನಾದ ಜೊತೆ ಸಂಬಂಧ ಹೊಂದಿದೆ. ಚೀನಾ ದ್ವೀಪ ರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಆದರೆ, ಇದಕ್ಕೆ ಅಮೆರಿಕ ತೊಡರುಗಾಲು ಹಾಕಿದೆ. ಯಾವುದೇ ರಾಷ್ಟ್ರಗಳ ಸ್ವಾತಂತ್ರ್ಯದಲ್ಲಿ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದೆ. ಈ ನಿಯಮ ಮೀರಿದಲ್ಲಿ ತನ್ನ ಹಸ್ತಕ್ಷೇಪದ ಬಗ್ಗೆಯೂ ಎಚ್ಚರಿಕೆ ನೀಡಿದೆ.
ಅಮೆರಿಕದ ಈ ಎಚ್ಚರಿಕೆಯಿಂದ ಕುಪಿತಗೊಂಡಿರುವ ಡ್ರ್ಯಾಗನ್ ರಾಷ್ಟ್ರ ತೈವಾನ್ ಅನ್ನು ಚೀನಾದಿಂದ ಇಬ್ಭಾಗಿಸಿದರೆ ಅಥವಾ ಉಭಯ ರಾಷ್ಟ್ರಗಳ ಮಧ್ಯೆ ಮೂಗು ತೂರಿಸಿದಲ್ಲಿ ಯಾವುದೇ ರೀತಿಯ ಯುದ್ಧಕ್ಕೆ ಸನ್ನದ್ಧ ಎಂದು ಚೀನಾ ಗುಡುಗಿದೆ.
ಮೂಗು ತೂರಿಸಬೇಡಿ: ತೈವಾನ್ ಸ್ವಾತಂತ್ರ್ಯವನ್ನು ಘೋಷಿಸಿದರೆ, ಅಮೆರಿಕ ವಿರುದ್ಧ ಯುದ್ಧ ಮಾಡಲೂ ದೇಶ ಹಿಂಜರಿಯುವುದಿಲ್ಲ ಎಂದು ಸಿಂಗಾಪುರದಲ್ಲಿ ನಡೆದ ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ವೈಫೆಂಗ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಮೂಲಕ ತೈವಾನ್ ವಿಚಾರದಲ್ಲಿ ಅಮೆರಿಕಕ್ಕೆ ಚೀನಾ ಖಡಕ್ ಎಚ್ಚರಿಕೆ ನೀಡಿದೆ.
ತೈವಾನ್ ಅನ್ನು ಚೀನಾದಿಂದ ಬೇರ್ಪಡಿಸಲು ಯಾರಾದರೂ ಧೈರ್ಯ ಮಾಡಿದರೆ, ಚೀನಾದ ಸೇನೆಯು ಯುದ್ಧಕ್ಕೂ ಸಜ್ಜಾಗಲಿದೆ. ಯಾವುದೇ ಬೆಲೆ ತೆತ್ತಾದರೂ ತೈವಾನ್ ಸ್ವಾತಂತ್ರ್ಯಕ್ಕಾಗಿ ಮಾಡುವ ಪ್ರಯತ್ನವನ್ನು ಹತ್ತಿಕ್ಕುತ್ತೇವೆ. ತೈವಾನ್ ಚೀನಾಕ್ಕೆ ಸೇರಿದ್ದಾಗಿದೆ. ಈ ರಾಷ್ಟ್ರದ ಮೂಲಕ ದೇಶದ ಮೇಲೆ ಸವಾರಿ, ಅತಿಕ್ರಮಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ.
ಎಚ್ಚರಿಸಿದ್ದ ಅಮೆರಿಕ: ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತೈವಾನ್ ಮೇಲೆ ಚೀನಾ ನಿರ್ಬಂಧಗಳನ್ನು ಹೇರಿ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ತೈವಾನ್ ಪರವಾಗಿ ಅಮೆರಿಕ ಹೋರಾಡಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಇದೀಗ ಚೀನಾ ಗಟ್ಟಿ ಧ್ವನಿಯಲ್ಲಿ ತಿರುಗೇಟು ನೀಡಿದೆ.
ತೈವಾನ್ ಸ್ವ-ಆಡಳಿತ ದ್ವೀಪ ರಾಷ್ಟ್ರವಾಗಿದೆ. ಇದೀಗ ಚೀನಾದ ಆಕ್ರಮಣದ ಭೀತಿ ಎದುರಿಸುತ್ತಿದೆ. ಇದನ್ನು ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ಚೀನಾ ಅದನ್ನು ವಶಪಡಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದೆ.
ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ