ಟೊರೊಂಟೊ : ಕೆನಡಾದಲ್ಲಿ ಫುಡ್ ಡೆಲಿವರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಕಾರ್‌ಜಾಕಿಂಗ್ ಘಟನೆಯ ಸಂದರ್ಭದಲ್ಲಿ ಹಿಂಸಾತ್ಮಕವಾಗಿ ಹಲ್ಲೆಗೊಳಗಾದ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್‌ನ ಕರೀಂಪುರ್ ಚಾಹ್ವಾಲಾ ಗ್ರಾಮದ ಗುರ್ವಿಂದರ್ ನಾಥ್ ಎಂಬಾತನನ್ನು ಈ ತಿಂಗಳ ಆರಂಭದಲ್ಲಿ ಫುಡ್ ಆರ್ಡರ್ ನೀಡುವ ನೆಪದಲ್ಲಿ ಮಿಸ್ಸಿಸೌಗಾದ ಬ್ರಿಟಾನಿಯಾ ರಸ್ತೆ ಮತ್ತು ಕ್ರೆಡಿಟ್‌ವ್ಯೂ ಪ್ರದೇಶಕ್ಕೆ ಬರುವಂತೆ ದಾಳಿಕೋರರು ಆಮಿಷ ಒಡ್ಡಿದ್ದರು.
ಟೊರೊಂಟೊದ ಲಾಯಲಿಸ್ಟ್ ಕಾಲೇಜಿನ ವಿದ್ಯಾರ್ಥಿ ನಾಥ್ ಆಗಂತುಕರು ಹೇಳಿದ ಜಾಗಕ್ಕೆ ಬಂದಿದ್ದ. ಆಗ ಆತನ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಲಾಯಿತು ಮತ್ತು ಆತನ ವಾಹನವನ್ನು ದೋಚಲಾಯಿತು. ಇದಾದ ನಂತರ ತೀವ್ರ ಗಾಯಗೊಂಡಿದ್ದ ಯುವಕ ಜುಲೈ 14 ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ.
ಹಲ್ಲೆಯ ಘಟನೆಯಲ್ಲಿ ಅನೇಕ ಶಂಕಿತರು ಭಾಗಿಯಾಗಿದ್ದಾರೆಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಯುವಕನನ್ನು ಸ್ಥಳಕ್ಕೆ ಕರೆಸುವ ದುರುದ್ಧೇಶದಿಂದ ಫುಡ್ ಆರ್ಡರ್ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಿಜ್ಜಾ ಆರ್ಡರ್ ಮಾಡಲಾಗಿದ್ದ ಆಡಿಯೋ ರೆಕಾರ್ಡಿಂಗ್ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗಿದೆ. ಆದರೆ ನಾಥ್ ಒಬ್ಬ ಅಮಾಯಕ ಬಲಿಪಶು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ಹೇಳಿದರು. ಶಂಕಿತ ವಾಹನವನ್ನು ಪೊಲೀಸರು ಗುರುತಿಸಿದ್ದಾರೆ. ಬಿಳಿ ಹುಂಡೈ ಆಕ್ಸೆಂಟ್ ಸೆಡಾನ್ ಕಾರು ಇದಾಗಿದೆ.
ನಾಥ್ ಅವರ ವಾಹನವನ್ನು ಓಲ್ಡ್ ಕ್ರೆಡಿಟ್ ವ್ಯೂ ಮತ್ತು ಓಲ್ಡ್ ಡೆರ್ರಿ ರಸ್ತೆಗಳ ಪ್ರದೇಶದಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ. ಈ ಸ್ಥಳ ಅಪರಾಧ ನಡೆದ ಸ್ಥಳದಿಂದ ಐದು ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿದೆ ಎಂದು ಪೀಲ್ ರೀಜನಲ್ ಪೋಲೀಸ್ ನ ಹೋಮಿಸೈಡ್ ಬ್ಯೂರೋದ ಫಿಲ್ ಕಿಂಗ್ ತಿಳಿಸಿದ್ದಾರೆ. ವಾಹನವನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಹಲವಾರು ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಿಂಗ್ ಹೇಳಿದರು.
ಸಿಸಿಟಿವಿ ಫೂಟೇಜ್‌ನಲ್ಲಿ, ಕಪ್ಪು ಬಟ್ಟೆಯನ್ನು ಧರಿಸಿರುವ ಪುರುಷನೊಬ್ಬನು ವಾಹನದಿಂದ ನಿರ್ಗಮಿಸುತ್ತಿರುವುದು ಕಂಡುಬಂದಿದೆ. ನಾಥ್ ಮತ್ತು ದಾಳಿಕೋರರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಆಯುಧ ಬಳಸಲಾಗಿದೆಯೇ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ ಎಂದು ಅವರು ಹೇಳಿದರು.
ಘಟನೆಯಿಂದ ಆಘಾತಕ್ಕೊಳಗಾದ ಸಮುದಾಯದ ಸದಸ್ಯರು ಶನಿವಾರ ಮಿಸ್ಸಿಸೌಗಾದಲ್ಲಿ ಕ್ಯಾಂಡಲ್‌ಲೈಟ್ ಜಾಗರಣೆ ನಡೆಸಿದರು. 200ಕ್ಕೂ ಹೆಚ್ಚು ಜನರು ನಾಥ್ ಅವರ ಸಾವಿಗೆ ಶೋಕ ವ್ಯಕ್ತಪಡಿಸಿದರು.
ನಾಥ್ ಅವರ ಸಾವಿನಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ತುಂಬಾ ಆಸೆ ಆಕಾಂಕ್ಷೆ ನಿರೀಕ್ಷೆಗಳನ್ನು ಇಟ್ಟುಕೊಂಡು ಕುಟುಂಬದವರು ಆತನನ್ನು ಕೆನಡಾಗೆ ಓದಲು ಕಳುಹಿಸಿದ್ದರು. ಮಧ್ಯಮ ವರ್ಗದ ಕುಟುಂಬದವನಾದ ಗುರ್ವಿಂದರ್ ನಾಥ್ ತನ್ನ ಕುಟುಂಬಕ್ಕೆ ಏಕೈಕ ಆಶಾಕಿರಣವಾಗಿದ್ದನು. ಆತನ ಭವಿಷ್ಯದ ಮೇಲೆ ಆತನ ಕುಟುಂಬದ ಭವಿಷ್ಯ ಅವಲಂಬಿತವಾಗಿತ್ತು ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಗಗನದೀಪ್ ಕೌರ್ ಎಂಬುವರು ನುಡಿದರು.
ಇದನ್ನೂ ಓದಿ: ಇಸ್ರೇಲ್; ನ್ಯಾಯಾಂಗ ಸುಧಾರಣಾ ಮಸೂದೆ ವಿರೋಧಿಸಿ ಭಾರಿ ಪ್ರತಿಭಟನೆ