ಲಂಡನ್(ಇಂಗ್ಲೆಂಡ್): ಬ್ರಿಟನ್ ರಾಜಕೀಯ ಸುಳಿಗಾಳಿಗೆ ಸಿಲುಕಿದೆ. ಆರ್ಥಿಕ ಹಿಂಜರಿತ, ಭರವಸೆ ಈಡೇರಿಸಲು ಸೋತ ಕಾರಣ ನೀಡಿ ಪ್ರಧಾನಿ ಲಿಜ್ ಟ್ರಸ್ ಮೊನ್ನೆಯಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಪ್ರಧಾನಿ ಆಯ್ಕೆ ಪ್ರಕ್ರಿಯೆ ಮತ್ತೆ ಆರಂಭಗೊಂಡಿದ್ದು, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಧಾನಿ ಸ್ಥಾನಕ್ಕೆ ಮರು ಪ್ರವೇಶ ಪಡೆದಿದ್ದಾರೆ.
ಲಿಜ್ ಟ್ರಸ್ಗೂ ಮೊದಲು ಬ್ರಿಟನ್ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಅಧಿಕಾರದ ವೇಳೆ ದೇಶ ಭಾರಿ ಆರ್ಥಿಕ ಹಿನ್ನಡೆ ಅನುಭವಿಸಿತ್ತು. ಇದರಿಂದ ಆಡಳಿತದ ವಿರುದ್ಧ ವಿರೋಧ ಹೆಚ್ಚಿ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಲಿಜ್ ಟ್ರಸ್, ಭಾರತೀಯ ಮೂಲದ ರಿಷಿ ಸುನಕ್ ಸೇರಿದಂತೆ ಹಲವರು ಪ್ರಧಾನಿ ಗಾದಿಗಾಗಿ ಪೈಪೋಟಿ ನಡೆಸಿದ್ದರು.
ಬಳಿಕ ಲಿಜ್ ಟ್ರಸ್ ಭಾರಿ ಅಂತರದಿಂದ ರಿಷಿ ಸುನಕ್ರನ್ನು ಸೋಲಿಸಿ ಪ್ರಧಾನಿಯಾಗಿದ್ದರು. ಅಧಿಕಾರ ವಹಿಸಿಕೊಂಡ 45 ದಿನಗಳಲ್ಲೇ ಭರವಸೆ ಈಡೇರಿಸುವಲ್ಲಿ ಎಡವಿದ ಲಿಜ್ ಟ್ರಸ್ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ. ಇದರಿಂದ ಬ್ರಿಟನ್ ಕಳೆದ 5 ವರ್ಷಗಳಲ್ಲಿ 7 ಪ್ರಧಾನಿಗಳನ್ನು ಕಂಡಿದೆ. ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಮತ್ತೆ ಪ್ರಧಾನಿ ಹುದ್ದೆಗಾಗಿ ಸ್ಪರ್ಧಿಸಲಿದ್ದು, ಅವರ ಜೊತೆಗೆ ಬೋರಿಸ್ ಜಾನ್ಸನ್ ಕೂಡ ಸೆಣಸಲಿದ್ದಾರೆ.
ಈ ಹಿಂದೆ ರಿಷಿ ಸುನಕ್ ಅವರು ಬೋರಿಸ್ ಜಾನ್ಸನ್ ಅವರ ಮಂತ್ರಿಮಂಡಲದ ಹಣಕಾಸು ಸಚಿವರಾಗಿದ್ದರು. ಬಳಿಕ ಆರ್ಥಿಕ ಹಿಂಜರಿತ ತಡೆಯದ ಪ್ರಧಾನಿಯ ನಿಲುವುಗಳ ವಿರುದ್ಧ ಸಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಓದಿ: ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಕೇಳಿ ಬಂತು ಜಾನ್ಸನ್ ಬೋರಿಸ್ ಹೆಸರು.. ಸುನಕ್ಗೆ ತರುತ್ತಾ ಸಂಕಷ್ಟ!?