ವಾಷಿಂಗ್ಟನ್( ಅಮೆರಿಕ): ಭಾರತಕ್ಕೆ ಪ್ರಯಾಣಿಸುವ ಅಮೆರಿಕ ಪ್ರಜೆಗಳಿಗೆ ಇಲ್ಲಿ ಹೆಚ್ಚಿನ ಅಪಾಯದ ಎಚ್ಚರಿಕೆ ನೀಡಿದ್ದ ಬೈಡನ್ ಸರ್ಕಾರ ಇದೀಗ ತನ್ನ ನಿರ್ಧಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ. ಆದರೂ ಜಾಗರೂಕತೆ ವಹಿಸುವಂತೆ ಸೂಚಿಸಿದೆ. ಮಂಗಳವಾರದ ಹೊಸ ಪ್ರಯಾಣ ಸಲಹೆಗಳನ್ನು ನೀಡಿರುವ ಅಮೆರಿಕ, ಭಾರತಕ್ಕೆ ಪ್ರಯಾಣಿಸುವಾಗ ಹೆಚ್ಚಿದ ಜಾಗರೂಕತೆ ವಹಿಸುವಂತೆ ತನ್ನ ನಾಗರಿಕರನ್ನು ಒತ್ತಾಯಿಸಿದೆ. ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಹಾಗೂ ಭಾರತ-ಪಾಕಿಸ್ತಾನ ಗಡಿಯ 10 ಕಿಮೀ ಒಳಗೆ ಪ್ರಯಾಣಿಸದಂತೆ ಸಲಹೆ ನೀಡಿದೆ.
ಅಪರಾಧ ಮತ್ತು ಭಯೋತ್ಪಾದನೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಇರುವಂತೆ ಬೈಡನ್ ಸರ್ಕಾರ ಹೇಳಿತ್ತಲ್ಲದೇ, ಇದೀಗ ಭಾರತಕ್ಕೆ ಅಮೆರಿಕ ಪ್ರಜೆಗಳ ಪ್ರಯಾಣದ ಅಪಾಯವನ್ನ ಹಂತ 3 ರಿಂದ 2 ಕ್ಕೆ ಕಡಿಮೆ ಮಾಡಿದೆ. ಜನವರಿ 25 ರಂದು ಕೊನೆಯ ಸಲಹೆ ನೀಡಿತ್ತು. ಭಾರತದಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ - ಸಿಡಿಸಿ ತನ್ನ ಆರೋಗ್ಯ ನೋಟಿಸ್‌ನಲ್ಲಿ ಹಂತ 1ಕ್ಕೆ ಇಳಿಸಿದ ಮರು ದಿನವೇ ಪ್ರಯಾಣ ಸಲಹೆಗಳನ್ನು ನೀಡಲಾಗಿದೆ.
ಎರಡೂ ಸಲಹೆಗಳು ಭಾರತದಲ್ಲಿನ ಪರಿಸ್ಥಿತಿಯು ಈಗ ಸಹಜ ಸ್ಥಿತಿಗೆ ಮರಳುತ್ತಿರುವುದನ್ನ ಅಮೆರಿಕ ಪರಿಗಣಿಸಿದೆ ಎಂಬ ಅಂಶವನ್ನು ಸೂಚಿಸುತ್ತದೆ. ಆದರೆ ಜಮ್ಮು-ಕಾಶ್ಮೀರ ಮತ್ತು ಭಾರತ-ಪಾಕ್ ಗಡಿ 10 ಕಿಲೋ ಮೀಟರ್ ವ್ಯಾಪ್ತಿಗೆ ಮಾತ್ರ ತೆರಳದಂತೆ ಎಚ್ಚರಿಸಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ಈ ಕೇಂದ್ರಾಡಳಿತ ಪ್ರದೇಶದ (ಪೂರ್ವ ಲಡಾಖ್ ಪ್ರದೇಶ ಮತ್ತು ಇದರ ರಾಜಧಾನಿ ಲೇಹ್‌ಗೆ ಭೇಟಿ ಹೊರತುಪಡಿಸಿ) ಎಲ್ಲಾ ಪ್ರಯಾಣಗಳನ್ನು ತಪ್ಪಿಸಿ ಎಂದು ಸಲಹೆ ನೀಡಿದೆ.
ಇದನ್ನೂ ಓದಿ: ಕೀವ್‌ನಿಂದ ರಷ್ಯಾ ಸೇನಾ ಕಾರ್ಯಾಚರಣೆ ಕಡಿತ: ಸಂದೇಹ ವ್ಯಕ್ತಪಡಿಸಿದ ಅಮೆರಿಕ