ಇಸ್ಲಾಮಾಬಾದ್(ಪಾಕಿಸ್ತಾನ) : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ಭಾರತ ಸರ್ಕಾರವನ್ನು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೊಗಳಿದ್ದಾರೆ. ಅಮೆರಿಕದ ಒತ್ತಡದ ನಡುವೆಯೂ ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರತವು ತೈಲ ಖರೀದಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಶನಿವಾರ ಪ್ರತಿ ಲೀಟರ್ ಪೆಟ್ರೋಲ್ಗೆ 9.5 ರೂ. ಮತ್ತು ಡೀಸೆಲ್ಗೆ 7 ರೂ. ಕಡಿಮೆ ಮಾಡಿತ್ತು. ಇದರ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಪಾಕಿಸ್ತಾನದ ಮುಸ್ಲಿಂ ಲೀಗ್ (ಎನ್) ನೇತೃತ್ವದ ಸರ್ಕಾರವನ್ನು 'ತಲೆಯಿಲ್ಲದ ಕೋಳಿಯಂತಹ ಆರ್ಥಿಕತೆ' ಎಂದು ಟೀಕಿಸಿದ್ದಾರೆ.
ದೇಶದ ಆಡಳಿತ ಬದಲಾವಣೆ ಬಯಸಿದವರು ಈಗ ದೇಶದ ಆರ್ಥಿಕತೆಯು ತಲೆಬುರುಡೆಯಿಲ್ಲದ ಕೋಳಿಯಂತೆ ಓಡುತ್ತಿರುವಾಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ನಮ್ಮ ಸರ್ಕಾರ ಪಾಕಿಸ್ತಾನದ ಹಿತಾಸಕ್ತಿಗೆ ಆದ್ಯತೆ ನೀಡಿತ್ತು. ಆದರೆ, ದುರದೃಷ್ಟವಶಾತ್ ಸ್ಥಳೀಯ ಮೀರ್ ಜಾಫರ್‌ಗಳು ಮತ್ತು ಮೀರ್ ಸಾದಿಕ್‌ಗಳು ಆಡಳಿತ ಬದಲಾವಣೆಗೆ ಒತ್ತಾಯಿಸುವ ಬಾಹ್ಯ ಒತ್ತಡಕ್ಕೆ ಮಣಿದಿದ್ದಾರೆ ಎಂದು ಖಾನ್ ವಾಗ್ದಾಳಿ ನಡೆಸಿದ್ದಾರೆ.
ಇತ್ತ, ಕ್ವಾಡ್‌ನ ಭಾಗವಾಗಿದ್ದರೂ ಭಾರತವು ಅಮೆರಿಕ ಒತ್ತಡದಿಂದ ದೂರವಿತ್ತು. ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸಿತು. ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ನಮ್ಮ ಸರ್ಕಾರವು ಸಾಧಿಸಲು ಆಗದ ಕೆಲಸವನ್ನು ಭಾರತ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಸುಂಕ ಕಡಿತದ ನಷ್ಟ ಕೇಂದ್ರದ್ದೇ, ಆದ್ರೂ ರಾಜ್ಯಗಳ ಮೇಲೆ ಹೊರೆ : ಚಿದಂಬರಂ