ಪೇಶಾವರ (ಪಾಕಿಸ್ತಾನ): ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಪಕ್ಷದ ಸಮಾವೇಶದಲ್ಲಿ ಭಾನುವಾರ ಪ್ರಬಲ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಸುಮಾರು 200 ಜನರು ಗಾಯಗೊಂಡಿದ್ದಾರೆ. ಬಜೌರ್ ಬುಡಕಟ್ಟು ಜಿಲ್ಲೆಯ ರಾಜಧಾನಿ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ.
ಖೈಬರ್ ಪಖ್ತುಂಖ್ವಾದಲ್ಲಿ ಜೆಯುಐ-ಎಫ್‌ನ ವಕ್ತಾರ ಅಬ್ದುಲ್ ಜಲೀಲ್ ಖಾನ್ ಪ್ರಕಾರ, ಸಂಜೆ 4 ಗಂಟೆಗೆ ಈ ಪ್ರಬಲ ಬಾಂಬ್ ಸ್ಫೋಟಗೊಂಡಿದೆ. ಮೌಲಾನಾ ಲಯೀಕ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಸ್ಫೋಟಿಸಲಾಗಿದೆ. ಜೆಯುಐ-ಎಫ್ ಕೇಂದ್ರ ಸಮಿತಿ ಸದಸ್ಯರಾದ ಖೈಬರ್ ಪಖ್ತುಂಖ್ವಾ ಗವರ್ನರ್ ಹಾಜಿ ಗುಲಾಂ ಅಲಿ ಬಾಂಬ್ ಸ್ಫೋಟದಿಂದ ಉಂಟಾದ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ಮತ್ತೊಂದೆಡೆ, ಗಾಯಾಳುಗಳ ಪೈಕಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದೆ. ಇದೊಂದು ಆತ್ಮಾಹುತಿ ದಾಳಿಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಭದ್ರತಾ ಪಡೆಗಳು ಈಗಾಗಲೇ ಸ್ಥಳಕ್ಕೆ ದೌಡಾಯಿಸಿ, ಇಡೀ ಪ್ರದೇಶವನ್ನು ಸುತ್ತುವರಿದಿವೆ.
ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪ್ರಾಂತ್ಯದ ಉಸ್ತುವಾರಿ ಮುಖ್ಯಮಂತ್ರಿ ಅಜಮ್ ಖಾನ್ ಅವರಿಗೆ ಒತ್ತಾಯಿಸಿದ್ದಾರೆ. ಅಲ್ಲದೇ, ಪಕ್ಷದ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ರಕ್ತದಾನ ಮಾಡಬೇಕು. ಜೊತೆಗೆ ಕಾರ್ಯಕರ್ತರು ಶಾಂತಿಯುತವಾಗಿರಬೇಕು. ಒಕ್ಕೂಟ ಮತ್ತು ಪ್ರಾಂತೀಯ ಸರ್ಕಾರಗಳು ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಜೆಯುಐ-ಎಫ್ ಮತ್ತೊಬ್ಬ ನಾಯಕ ಹಫೀಜ್ ಹಮ್ದುಲ್ಲಾ ಇಂದಿನ ಸಮಾವೇಶಕ್ಕೆ ಹಾಜರಾಗಬೇಕಿತ್ತು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದ ಅವರು ಬರಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಸ್ಫೋಟವನ್ನು ಬಲವಾಗಿ ಖಂಡಿಸುತ್ತೇನೆ. ಇದು ಜಿಹಾದ್ ಅಲ್ಲ. ಇದು ಮಾನವೀಯತೆ ಮೇಲಿನ ದಾಳಿಯಾಗಿದೆ. ಇದೊಂದು ಭಯೋತ್ಪಾದನಾ ಕೃತ್ಯ. ಈ ಘಟನೆಯ ಹಿಂದಿನ ಜನರಿಗೆ ಸಂದೇಶವನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಜೆಯುಐ-ಎಫ್ ಗುರಿಯಾಗಿರುವುದು ಇದೇ ಮೊದಲಲ್ಲ ಎಂದಿರುವ ಅವರು, ಈ ಹಿಂದೆಯೂ ಇಂತಹ ದಾಳಿ ನಡೆದಿದೆ. ನಮ್ಮ ಕಾರ್ಯಕರ್ತರನ್ನು ಗುರಿಯಾಗಿಸಲಾಗಿದೆ. ನಾವು ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: Drone attack: ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ