ವಾಷಿಂಗ್ಟನ್: ಯುರೋಪಿಯನ್ ಒಕ್ಕೂಟದ ನ್ಯಾಟೋ ಪಡೆಗಳಿಗೆ ಉಕ್ರೇನ್ ಸೇರ್ಪಡೆ ವಿರೋಧಿಸಿ ಆ ದೇಶದ ಮೇಲೆ ರಷ್ಯಾ ಯುದ್ಧ ಆರಂಭಿಸಿ ಎರಡು ವಾರಗಳೇ ಕಳೆದಿವೆ. ಎರಡನೇ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ಅತಿದೊಡ್ಡ ಈ ಭೂ ಸಂಘರ್ಷದ ಆರಂಭದಲ್ಲಿ ರಷ್ಯಾ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸಾಧಿಸಿ, ಹೆಚ್ಚು ಹೆಣಗಾಡುತ್ತಿದೆ.
1,50,000 ಕ್ಕಿಂತ ಹೆಚ್ಚು ರಷ್ಯನ್ ಪಡೆಗಳು ಆಕ್ರಮಣಕಾರಿ ಕ್ಷಿಪಣಿ, ಟ್ಯಾಂಕರ್‌ಗಳ ಮೂಲಕ ನಡೆಸಿದ ದಾಳಿಯಿಂದಾಗಿ ಕೆಲ ನಗರಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಕೀವ್ ಸರ್ಕಾರವನ್ನು ಉರುಳಿಸುವುದು, ಕ್ರೆಮ್ಲಿನ್-ಸ್ನೇಹಿ ನಾಯಕತ್ವದಿಂದ ಬದಲಾಯಿಸುವುದು ಪುಟಿನ್ ಸರ್ಕಾರದ ಮುಖ್ಯ ಉದ್ದೇಶ ಮಾತ್ರ ಇನ್ನೂ ಅಸ್ಪಷ್ಟವಾಗಿ ಉಳಿದಿದೆ.
ವಾಯು ಮತ್ತು ಭೂ ಸೇನೆ ನಡುವಿನ ಸಮನ್ವಯದ ಕೊರತೆ ಹಾಗೂ ಉಕ್ರೇನ್‌ನ ಆಕಾಶದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಲು ಅಸಮರ್ಥತೆ ಸೇರಿದಂತೆ ಹಲವಾರು ವೈಫಲ್ಯಗಳಿಂದ ರಷ್ಯಾದ ಒಟ್ಟಾರೆ ಆಕ್ರಮಣವು ನಿಧಾನಗೊಂಡಿದೆ ಎಂದು ಹೇಳಲಾಗಿದೆ.
ಉಕ್ರೇನ್‌ನಲ್ಲಿ ನಿಯೋಜಿಸಲಾದ ಸುಮಾರು 90ರಷ್ಟು ಯುದ್ಧ ಶಕ್ತಿಯನ್ನು ರಷ್ಯಾ ಉಳಿಸಿಕೊಂಡಿದೆ ಎಂದು ಪೆಂಟಗನ್ ಬುಧವಾರ ಅಂದಾಜಿಸಿದೆ. ಶಸ್ತ್ರಾಸ್ತ್ರಗಳು, ವಾಹನಗಳನ್ನು ನಾಶಪಡಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ. ಸೈನಿಕರನ್ನು ಕೊಲ್ಲಲಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ನಷ್ಟಗಳು ಆರಂಭದಲ್ಲಿ ಸಾಧಾರಣವಾಗಿದ್ದರೂ ಇಂದಿಗೆ ಮಹತ್ವದ್ದಾಗಿದೆ.
ಎರಡು ವಾರಗಳ ಯುದ್ಧವು ಉಕ್ರೇನ್‌ನಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಇತ್ತೀಚೆಗೆ ಅದು ವೇಗಗೊಂಡಿದೆ. 2 ಮಿಲಿಯನ್ ಉಕ್ರೇನಿಯನ್ನರು ತಮ್ಮ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಈ ಸಂಖ್ಯೆ ಇನ್ನೂಈ ಹೆಚ್ಚಾಗುವ ನಿರೀಕ್ಷೆಯಿದೆ.
ಸದ್ಯಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. 12 ಗಂಟೆಗಳ ವಿರಾಮದ ಬಳಿಕವೂ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ದಾಳಿಯ ಸಾಧ್ಯತೆ ಇದೆ. ಮತ್ತೊಂದೆಡೆ ಹಲವು ದೇಶಗಳು ಹಾಗೂ ವ್ಯಾಪಾರಿಕ ಸಂಸ್ಥೆಗಳು ರಷ್ಯಾಗೆ ನಿರ್ಬಂಧ ಹೇರಿರುವುದು ಯುದ್ಧವನ್ನು ನಿಧಾನಗೊಳಿಸುತ್ತಿರುವುದಕ್ಕೆ ಕಾರಣ ಎಂತಲೂ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ತೆರಿಗೆ ರದ್ದುಗೊಳಿಸಿ ಚಿನ್ನದ ಬೆಲೆ ಇಳಿಸಿದ ರಷ್ಯಾ: ಪುಟಿನ್ ನಿರ್ಧಾರದ ಉದ್ದೇಶವೇನು?