ಲಂಡನ್: ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್), ಕೋವಿಡ್ ತಂದಿಟ್ಟಿರುವ ಬಿಕ್ಕಟ್ಟಿನ ಸನ್ನಿವೇಶದಿಂದಾಗಿ ಸುಮಾರು 1,000 ಗುತ್ತಿಗೆ ಆಧಾರದ ಏಜೆನ್ಸಿ ಉದ್ಯೋಗಗಳನ್ನು ಕಡಿತಗೊಳಿಸಲು ಯೋಜನೆ ರೂಪಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಮುಂಬರುವ ತಿಂಗಳುಗಳಲ್ಲಿ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿನ ಗುತ್ತಿಗೆ - ಏಜೆನ್ಸಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲು ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ಅದು ಹೇಳಿದೆ.
ಬ್ರಿಟನ್ನ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಜೆಎಲ್ಆರ್, ಕೊರೊನಾ ಲಾಕ್‌ಡೌನ್ ನಂತರ ತನ್ನ ಮಾರಾಟದಲ್ಲಿ ಶೇ. 30.9ರಷ್ಟು ಕುಸಿತ ಕಂಡುಬಂದಿದೆ ಎಂದು ತಿಳಿಸಿದೆ. ಹೀಗಾಗಿ ತನ್ನ ಕಾರ್ಯದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸುಸ್ಥಿರ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಮತ್ತು ವ್ಯವಹಾರದ ದೀರ್ಘಕಾಲಿಕ ಯಶಸ್ಸು ಕಾಪಾಡುವ ಮೂಲಕ ಕಾರ್ಯದಕ್ಷತೆಯನ್ನು ಮತ್ತಷ್ಟು ಸಾಧಿಸಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಬ್ರಿಟನ್ನಲ್ಲಿರುವ ಎಲ್ಲ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಕಡಿತಗೊಳಿಸುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯು ಜುಲೈ ಕೊನೆಯಲ್ಲಿ ಪ್ರಾರಂಭವಾಗಲಿದ್ದು, ವರ್ಷದುದ್ದಕ್ಕೂ ಇರಲಿದೆ.