ಮಾಸ್ಕೋ: ರಷ್ಯಾದ ಶಾಶ್ವತ ಆಯೋಗ ವಿಶ್ವಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ಮುಂದೆ ತಾವು ತಯಾರಿಸಿರುವ ಕೋವಿಡ್ ಲಸಿಕೆ ಸ್ಟುಟ್ನಿಕ್ ಬಗ್ಗೆ ಮಾಹಿತಿ ನೀಡಲಿದೆ ಎಂದು ಆಯೋಗದ ವಕ್ತಾರ ಫ್ಯೂಡರ್ ಸ್ಟ್ರಿಝೋವಾಸ್ಕಿ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 2ರ ಬುಧವಾರ, ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತುಪಡಿಸಲಾಗುತ್ತದೆ. ಈ ವೇಳೆ ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ, ರಷ್ಯಾದಿಂದ ವಿಶ್ವಸಂಸ್ಥೆಗೆ ಕಾಯಂ ಪ್ರತಿನಿಧಿಯಾದ ವಾಸಿಲಿ ನೆಬೆನ್ಜಿಯಾ ಮತ್ತು ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್‌ಡಿಐಎಫ್) ಮುಖ್ಯಸ್ಥ ಕಿರಿಲ್ ಡಿಮಿಟ್ರಿಯೆವ್ ಭಾಗವಹಿಸಲಿದ್ದಾರೆ ಫ್ಯೂಡರ್ ಸ್ಟ್ರಿಝೋವಾಸ್ಕಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಡಾ. ರೆಡ್ಡೀಸ್, ಆರ್ಡಿಐಎಫ್ನಿಂದ ಸ್ಪುಟ್ನಿಕ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ಆರಂಭ
'ಸ್ಪುಟ್ನಿಕ್-ವಿ: ಕೋವಿಡ್ ವಿರುದ್ಧ ಲಸಿಕೆ' ಎಂಬ ತಲೆ ಬರಹದೊಂದಿಗೆ ಕೋವಿಡ್ ಲಸಿಕೆಯ ಪ್ರಸ್ತುತಿ ಮಾಡಲಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ಅಧಿವೇಶನದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಪರಿಚಯಿಸಲಾಗುತ್ತದೆ. ಈ ವೇಳೆ, ಸ್ಪುಟ್ನಿಕ್ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುತ್ತದೆ.
ಇದೇ ವರ್ಷದ ಆಗಸ್ಟ್ನಲ್ಲಿ ರಷ್ಯಾದ ಆರೋಗ್ಯ ಇಲಾಖೆ ಜಗತ್ತಿನ ಮೊದಲ ಕೊರೊನಾ ಲಸಿಕೆಯಾದ ಸ್ಪುಟ್ನಿಕ್ ನೋಂದಾಯಿಸಿ ಗಮನ ಸೆಳೆದಿತ್ತು. ಈ ಲಸಿಕೆಯನ್ನು ರಷ್ಯಾದ ಗಮೆಲಿಯಾ ರಿಸರ್ಚ್ ಸೆಂಟರ್ ಸಂಶೋಧನೆ ಮಾಡಿತ್ತು. ಇತ್ತೀಚೆಗೆ ಕೆಲವು ವರದಿಗಳನ್ನು ಬಿಡುಗಡೆ ಮಾಡಿದ್ದು, ಸುರಕ್ಷಿತ ಹಾಗೂ ಕೋವಿಡ್ ವೈರಾಣುವಿನೊಂದಿಗೆ ಯಶಸ್ವಿಯಾಗಿ ಹೋರಾಡಬಲ್ಲದು ಎಂದು ವರದಿಯಾಗಿದೆ