ವಿಂಡ್ಸರ್ ಕ್ಯಾಸಲ್: ಬ್ರಿಟನ್‌ನ ರಾಣಿ ಎಲಿಜಬೆತ್ II ಮತ್ತು ಪ್ರಿನ್ಸ್ ಫಿಲಿಪ್ ತಮ್ಮ 73ನೇ ವಿವಾಹ ವಾರ್ಷಿಕೋತ್ಸವವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಯಲ್ ದಂಪತಿ ತಮ್ಮ ಮೂವರು ಮರಿ ಮೊಮ್ಮಕ್ಕಳು ನೀಡಿದ ಫೋಟೋಗಳ ಸಂಗ್ರಹ ಕಾರ್ಡ್ ಬಿಡುಗಡೆ ಮಾಡಿದ್ದಾರೆ.
ಇನ್ನು ಗುರುವಾರದಂದು ಸಾರ್ವಜನಿಕವಾಗಿ ಫೋಟೋ ಒಂದು ಬಿಡುಗಡೆಯಾಗಿದ್ದು, ಅದರಲ್ಲಿ ರಾಣಿ ಎಲಿಜಬೆತ್ II ಮತ್ತು ಪ್ರಿನ್ಸ್ ಫಿಲಿಪ್ ವಿಂಡ್ಸರ್ ಕ್ಯಾಸಲ್‌ನಲ್ಲಿ ಸೋಫಾದಲ್ಲಿ ಕುಳಿತಿರುವುದನ್ನು ಕಾಣಬಹುದು. ಅವರ ಮೊಮ್ಮಗ ಪ್ರಿನ್ಸ್ ವಿಲಿಯಂ ಮತ್ತು ಅವರ ಪತ್ನಿ ಡಚೆಸ್ ಆಫ್ ಕೇಂಬ್ರಿಡ್ಜ್ ಮಕ್ಕಳು ಮಾಡಿದ ಕಾರ್ಡನ್ನು ಇವರು ಪರಿಶೀಲಿಸುತ್ತಿದ್ದಾರೆ.
ನವೆಂಬರ್ 20, 1947ರಂದು ವೆಸ್ಟ್ ಮಿನ್ಸ್ಟರ್ ಅಬ್ಬೆಯಲ್ಲಿ ರಾಯಲ್ ನೇವಿ ಲೆಫ್ಟಿನೆಂಟ್ ಫಿಲಿಪ್ ಮೌಂಟ್ ಬ್ಯಾಟನ್ ಅವರನ್ನು ಮದುವೆಯಾದಾಗ ಎಲಿಜಬೆತ್ಗೆ ಕೇವಲ 21 ವರ್ಷ. ಇನ್ನು ಅವರು 1952ರಿಂದ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದು, ಇತರ ಬ್ರಿಟಿಷ್ ದೊರೆಗಳಿಗಿಂತ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದಾರೆ.
ಇನ್ನು ರಾಣಿ ಎಲಿಜಬೆತ್ ತನ್ನ ಕರ್ತವ್ಯವನ್ನು ಇಂದಿಗೂ ಮುಂದುವರಿಸುತ್ತಿದ್ದು, 99 ವರ್ಷದ ಪ್ರಿನ್ಸ್ ಫಿಲಿಪ್ ಸಾರ್ವಜನಿಕ ಜೀವನದಿಂದ ನಿವೃತ್ತರಾಗಿದ್ದಾರೆ.