ಲಂಡನ್: 1995ರಲ್ಲಿ ರಾಜಕುಮಾರಿ ಡಯಾನಾ ಅವರೊಂದಿಗೆ ನಡೆಸಿದ ಟಿವಿ ಸಂದರ್ಶನದಲ್ಲಿ ವಿವಾದಾತ್ಮಕ ಸನ್ನಿವೇಶಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ನಿವೃತ್ತ ಹಿರಿಯ ನ್ಯಾಯಾಧೀಶರ ನೇಮಕಕ್ಕೆ ಬಿಬಿಸಿಯ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ಪ್ರಸಾರಕರು ಬುಧವಾರ ತಿಳಿಸಿದ್ದಾರೆ.
ರಾಜಕುಮಾರಿ ಡಯಾನಾ ಅವರ ಸಹೋದರ ಚಾರ್ಲ್ಸ್ ಸ್ಪೆನ್ಸರ್, 'ಬಿಬಿಸಿ ಪತ್ರಕರ್ತ ಮಾರ್ಟಿನ್ ಬಶೀರ್ ಸುಳ್ಳು ದಾಖಲೆ ಮತ್ತು ಹೇಳಿಕೆಗಳನ್ನು ನೀಡಿದ್ದಾರೆ' ಎಂಬ ವಿಷಯ ಪ್ರಸ್ತಾಪ ಮಾಡಿದ್ದು, ಈ ಬಳಿಕ ಸ್ವತಂತ್ರ ತನಿಖೆ ನಡೆಸಲು ಬಿಬಿಸಿ ನಿರ್ದೇಶಕರ ಮಂಡಳಿ ತೀರ್ಮಾನಿಸಿದೆ.
ಈ ಬಗ್ಗೆ ತನಿಖೆಗೆ ಒಬ್ಬ ಶ್ರೇಷ್ಠ ಮತ್ತು ಅತ್ಯಂತ ಗೌರವಾನ್ವಿತ ವ್ಯಕ್ತಿ ನಿವೃತ್ತ ಹಿರಿಯ ನ್ಯಾಯಾಧೀಶರಾದ ಜಾನ್ ಡೈಸನ್ರನ್ನು ನೇಮಕ ಮಾಡಿರುವುದಾಗಿ ಬಿಬಿಸಿ ಹೇಳಿದೆ.
"25 ವರ್ಷಗಳ ಹಿಂದೆ ಸಂದರ್ಶನ ನಡೆದಿದ್ದು, ಈ ವೇಳೆ ಬಶೀರ್ ಡಯಾನ ಬಗ್ಗೆ ಸುಳ್ಳು ದಾಖಲೆ ಮತ್ತು ಹೇಳಿಕೆಗಳನ್ನು ನೀಡಿದ್ದಾನೆ. ಡಯಾನ ಫೋನ್ ಸಹ ಹ್ಯಾಕ್ಗೆ ಒಳಗಾಗಿತ್ತು. ಅಷ್ಟೇ ಅಲ್ಲದೆ, ಆಕೆಯ ಮೇಲೆ ನಿಗಾ ಇಡಲು ಇಬ್ಬರನ್ನು ನೇಮಕ ಮಾಡಲಾಗಿತ್ತು. ಡಯಾನ ಇಂಟರ್ ವ್ಯೂವ್ನಲ್ಲಿ ಆಕೆಗೆ ಸಂಬಂಧಿಸಿದೆ ಎಂದು ಸುಳ್ಳು ಬ್ಯಾಂಕ್ ದಾಖಲೆಗಳನ್ನು ತೋರಿಸಲಾಗಿತ್ತು" ಎಂದು ಚಾರ್ಲ್ಸ್ ಸ್ಪೆನ್ಸರ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಮಾರ್ಟಿನ್ ಬಶೀರ್ ಈ ಸಂಬಂಧ ಕ್ಷಮೆಯಾಚಿಸುವಂತೆಯೂ ಒತ್ತಾಯಿಸಲಾಗಿದೆ.
1997ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕಾರು ಅಪಘಾತದಲ್ಲಿ ರಾಜಕುಮಾರಿ ಡಯಾನ ಮೃತಪಟ್ಟಿದ್ದರು. ಆದರೆ ಈ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿದ್ದವು. ಈ ವಿಷಯ ವಿಶ್ವಾದ್ಯಂತ ಭಾರಿ ಸದ್ದು ಕೂಡಾ ಮಾಡಿತ್ತು.