ಅಫ್ಘಾನಿಸ್ತಾನದ ಅತ್ಯಂತ ಪ್ರಮುಖ ಪ್ರಾಂತ್ಯ ಹಾಗೂ ತಾಲಿಬಾನ್ ರಕ್ಕಸರಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜಶೀರ್ ವಶಪಡಿಸಿಕೊಳ್ಳುವ ಉದ್ದೇಶದಿಂದ ಕಳೆದ ಹಲವು ದಿನಗಳಿಂದ ಭಾರಿ ಕಾಳಗ ನಡೆಯುತ್ತಿದೆ.
ಒಂದೆಡೆ, ತಾಲಿಬಾನ್ ಉಗ್ರರ ರಣೋತ್ಸಾಹ ಮತ್ತೊಂದೆಡೆ, ಅಫ್ಘಾನಿಸ್ತಾದ ಹಿಂದಿನ ಆಡಳಿತದಲ್ಲಿ ಸೇವೆ ಸಲ್ಲಿಸಿದ ಸೈನಿಕರು ಹಾಗೂ ತಾಲಿಬಾನಿ ವಿರೋಧಿ ಮೈತ್ರಿ ಪಡೆ (NRF) ತೀವ್ರ ಹೋರಾಟದಲ್ಲಿ ತೊಡಗಿವೆ.
ಇಡೀ ಜಗತ್ತಿನ ಗಮನ ಸೆಳೆದಿರುವ ಗಿರಿ ಶಿಖರಗಳಿಂದ ಕೂಡಿರುವ ಸುಂದರ ತಾಣ ಪಂಜಶೀರ್ ಈಗಾಗಲೇ ನಮ್ಮ ಕೈವಶವಾಗಿದೆ ಎಂದು ತಾಲಿಬಾನ್ ನಾಯಕರು ವಿಜಯದುಂಧುಬಿ ಮೊಳಗಿಸಿದ್ದಾರೆ. ಆದ್ರೆ, ಪಂಜಶೀರ್‌ನ ಕಲಿಗಳು ನಾವು ಶರಣಾಗಿಲ್ಲ ಎಂದೇ ಅಪ್ರತಿಮ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಜೊತೆಗೆ, ಅಂತಿಮ ಹಂತದವರೆಗಿನ ಹೋರಾಟದ ಪ್ರತಿಜ್ಞೆ ಕೈಗೊಂಡಿದ್ದಾರೆ.
ತಾಲಿಬಾನ್‌ನ ಮುಖ್ಯ ವಕ್ತಾರ ಜಬೀವುಲ್ಲಾ ಮುಜಾಹಿದ್ : ಹೊಸ ತಾಲಿಬಾನ್ ಉಗ್ರಪಡೆಯ ವಿಶೇಷತೆ ಅಂದರೆ ಈ ಬಾರಿ ಅವರಲ್ಲೊಬ್ಬ ಮುಖ್ಯ ವಕ್ತಾರನ ಆಯ್ಕೆಯಾಗಿದೆ. ಈತ ತಾಲಿಬಾನಿಗಳ ನೀತಿ-ನಿರ್ಧಾರಗಳ ಮಾಹಿತಿಯನ್ನು ಜಗತ್ತಿಗೆ ನೀಡುವ ಕೆಲಸ ಮಾಡುತ್ತಿದ್ದಾನೆ. ಕುತೂಹಲಕಾರಿ ಸಂಗತಿ ಅಂದರೆ ಈತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾನೆ.
ಓದಿ: ತಾಲಿಬಾನ್ ದಾಳಿ: ನ್ಯಾಷನಲ್ ರೆಸಿಸ್ಟ್ಯಾಂಟ್ ಫ್ರಂಟ್ನ ವಕ್ತಾರ ಫಾಹೀಮ್ ದಾಷ್ಟಿ ಸಾವು
ಪಂಜಶೀರ್ ಬಗ್ಗೆ ಈತ ನೀಡುವ ಮಾಹಿತಿ ಪ್ರಕಾರ, ನಮಗೆ ಪಂಜಶೀರ್‌ನಲ್ಲಿ ಪೂರ್ಣ ಪ್ರಮಾಣದ ವಿಜಯ ದೊರೆತಿದೆ. ಈ ಮೂಲಕ ದೇಶದಲ್ಲಿ ಯುದ್ಧ ಕೊನೆಗೊಂಡಿದೆ ಎಂದು ಸೋಮವಾರ ಹೇಳಿದ್ದಾನೆ.
ತಾಲಿಬಾನ್ ವಿರೋಧಿ ರಾಷ್ಟ್ರೀಯ ಮೈತ್ರಿ ಪಡೆ(NRF) ಹೇಳುವುದೇನು?: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಬಲವಂತವಾಗಿ ವಶಕ್ಕೆ ಪಡೆದ ತಾಲಿಬಾನ್ ಪಂಜಶೀರ್ ಶರಣಾತಿಗೆ ನೀಡಿದ್ದು ಕೇವಲ 4 ಗಂಟೆಗಳ ಸಮಯ. ಆದ್ರೆ, 20 ದಿನಗಳು ಕಳೆದರೂ ಪಂಜಶೀರ್ ಭದ್ರಕೋಟೆ ಪುಡಿಗಟ್ಟಲು ತಾಲಿಬಾನ್ ಉಗ್ರ ಪಡೆಗೆ ಸಾಧ್ಯವಾಗಿಲ್ಲ. ಈಗಲೂ ಅಷ್ಟೇ.. ತಾಲಿಬಾನ್ ವಿರೋಧಿ ಪಡೆ ಸೋಲೊಪ್ಪಿಕೊಳ್ಳಲು ಸುತಾರಾಂ ಸಿದ್ಧವಿಲ್ಲ. ಪಂಜಶೀರ್‌ಗಾಗಿ ನಮ್ಮ ಹೋರಾಟ ಅವಿರತ, ತಾಲಿಬಾನಿಗಳ ವಿರುದ್ಧ ನಮ್ಮ ಪ್ರತಿರೋಧ ಮುಂದುವರೆಯಲಿದೆ ಎಂದು ಅವರು ಗಟ್ಟಿಧ್ವನಿಯಲ್ಲಿ ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ.
ಪಂಜಶೀರ್‌ನ ಕಲಿಗಳು ಅಹಮ್ಮದ್ ಮಸೂದ್ ಮತ್ತು ಅಮರುಲ್ಲಾ ಸಲೇಹ್ : ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಹಾಗೂ ತಾಲಿಬಾನ್ ಪ್ರತಿರೋಧ ಪಡೆಯ ಧೀರ ನಾಯಕ ಅಹಮ್ಮದ್ ಮಸೂದ್ ಪಂಜಶೀರ್‌ನಲ್ಲೇ ಇದ್ದು ಯುದ್ಧ ಮುನ್ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದ್ರೆ, ಕರಾರುವಕ್ಕಾಗಿ ಉಭಯ ನಾಯಕರು ಎಲ್ಲಿದ್ದಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.
ಸಲೇಹ್ ತಾಲಿಬಾನಿಗಳ ಯುದ್ಧದಲ್ಲಿ ಸಾವಿಗೀಡಾದರು ಅಥವಾ ದೇಶ ಬಿಟ್ಟು ಪಲಾಯಗೈದರು ಎಂಬ ಸುದ್ದಿ ಇತ್ತೀಚೆಗೆ ತಾಲಿಬಾನಿಗಳು ಹೇಳುತ್ತಿದ್ದರು. ಈ ನಡುವೆ, ಸ್ವತ: ವಿಡಿಯೋ ಮೂಲಕ ಮಾತನಾಡಿದ ಸಲೇಹ್, 'ನಾನು ದೇಶ ಬಿಟ್ಟು ಹೋಗುವ ಹೇಡಿಯಲ್ಲ. ಪಂಜಶೀರ್‌ನಲ್ಲೇ ಇದ್ದೇನೆ' ಎಂದು ಹೇಳುತ್ತಾ, ತಾಲಿಬಾನಿಗಳ ಸಮರ ಕ್ರೌರ್ಯ ನೀತಿಗಳನ್ನು ಜಗತ್ತಿಗೆ ವಿವರಿಸಿದ್ದರು.
ಮುಖ್ಯಾಂಶಗಳು :
ಸೆಪ್ಟೆಂಬರ್ 6ರ ಬೆಳವಣಿಗೆ
-'ನಾವು ಪಂಜಶೀರ್ ಆಕ್ರಮಿಸಿಕೊಂಡಿದ್ದೇವೆ, ಯುದ್ಧ ಮುಗಿಯಿತು. ಹೊಸ ಸರ್ಕಾರ ರಚನೆ ಸನ್ನಿಹಿತ'-ತಾಲಿಬಾನ್
-ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚನೆ ಮಾಡುತ್ತೇವೆ : ತಾಲಿಬಾನ್ ನಾಯಕ ಮುಲ್ಲಾ ಬರಾದಾರ್
-ನಾವು ನೂರಾರು ತಾಲಿಬಾನ್ ಉಗ್ರರನ್ನು ವಶಕ್ಕೆ ಪಡೆದಿದ್ದೇವೆ. ಪ್ರಾಂತ್ಯದ ಪ್ರಮುಖ ಸ್ಥಳಗಳಲ್ಲಿ(Strategic positions) ನಮ್ಮ ಹೋರಾಟ ಮುಂದುವರೆದಿದೆ- ರಾಷ್ಟ್ರೀಯ ಮೈತ್ರಿ ಕೂಟ (NRF)
- ಸೆಪ್ಟೆಂಬರ್ 5ರ ಬೆಳವಣಿಗೆ
-ತಾಲಿಬಾನ್ ದಾಳಿಯಿಂದ ಪಂಜಶೀರ್ ಪ್ರಾಂತ್ಯಕ್ಕಾಗಿರುವ ಪ್ರಮುಖ ಕಷ್ಟ-ನಷ್ಟ ಒಪ್ಪಿಕೊಂಡ ರಾಷ್ಟ್ರೀಯ ಮೈತ್ರಿಕೂಟ
ರಾಷ್ಟ್ರೀಯ ಮೈತ್ರಿ ಕೂಟದ (NRF) ಬಗ್ಗೆ ಒಂದಿಷ್ಟು ಮಾಹಿತಿ :
-ತಾಲಿಬಾನ್ ವಿರೋಧಿ ಸೇನಾನಿಗಳು ಹಾಗೂ ಅಫ್ಘಾನಿಸ್ತಾನದ ಈ ಹಿಂದಿನ ಸೇನೆಯಲ್ಲಿದ್ದ ಸೈನಿಕರು ಹಾಗೂ ಸ್ಥಳೀಯ ಜನರೇ ಇವರ ಶಕ್ತಿ. ಇವರನ್ನು ಬಳಸಿಕೊಂಡೇ ಪಂಜಶೀರ್ ಉಳಿಸಿಕೊಳ್ಳಲು ಅವಿರತ ಹೋರಾಟ ನಡೆಸುತ್ತಿದ್ದಾರೆ.
ಈ ಮೈತ್ರಿ ಪಡೆ ಮುನ್ನಡೆಸುವವರು ಯಾರು? : ಅಹಮ್ಮದ್ ಮಸೂದ್-ಸೋವಿಯತ್ ವಿರೋಧಿ ಹಾಗೂ ತಾಲಿಬಾನ್ ವಿರೋಧಿ ಜನಪ್ರಿಯ ನಾಯಕ ಅಹಮ್ಮದ್ ಶಾ ಮಸೂದ್ ಅವರ ಪುತ್ರ ಅಹಮ್ಮದ್ ಮಸೂದ್. ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್.
ಓದಿ: ತಾಲಿಬಾನ್ ಕ್ರೌರ್ಯ: ಕುಟುಂಬಸ್ಥರ ಮುಂದೆಯೇ ಗರ್ಭಿಣಿ ಬರ್ಬರ ಹತ್ಯೆ