ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಸೇರಿದಂತೆ ಜಗತ್ತಿನ ಯಾವುದೇ ದೇಶಕ್ಕೂ ಮೂಗು ತೂರಿಸಲು ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ಹೇಳಿದೆ.
2001ರಲ್ಲಿ ಅಮೆರಿಕದ ಬಹುಮಹಡಿ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ(WTC) ಮೇಲೆ ಅಲ್ ಖೈದಾ ಉಗ್ರ ಸಂಘಟನೆ ಭೀಕರ ದಾಳಿ ನಡೆಸಿದ ನಂತರ ಅಮೆರಿಕ 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಸೇನೆ ನಿಯೋಜಿಸಿತ್ತು. ನಂತರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕಳೆದ ಆಗಸ್ಟ್ 31ರ ಗಡುವಿಗೂ ಮುನ್ನವೇ ಅಮೆರಿಕ ತನ್ನ ಸೇನೆಯನ್ನು ಹಿಂಪಡೆದುಕೊಂಡಿತು. ಈ ಬೆನ್ನಲ್ಲೇ ಮಿಂಚಿನ ವೇಗದಲ್ಲಿ ದೇಶವನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್ಇದೀಗ ಹೊಸ ಸರ್ಕಾರ ರಚನೆಯ ಇಕ್ಕಟ್ಟಿನಲ್ಲಿ ಸಿಲುಕಿದೆ.
ಇತ್ತೀಚೆಗೆ, ಯುದ್ಧಪೀಡಿತ ದೇಶದ ಸರ್ಕಾರ ರಚನೆಯಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ಜಗತ್ತು ಗಮನಿಸಿದೆ. ಇದಕ್ಕೆ ಕಾರಣವಾಗಿದ್ದು ಪಾಕಿಸ್ತಾನದ ಗುಪ್ತಚರ ವಿಭಾಗದ (ISI) ನಿರ್ದೇಶಕ ಜನರಲ್ ಹಮೀದ್ ಕಾಬುಲ್ ಭೇಟಿ. ಈ ಭೇಟಿ ಮತ್ತು ನಡೆದ ಮಾತುಕತೆಯನ್ನು ತಾಲಿಬಾನ್ ನಾಯಕರೂ ಕೂಡಾ ಒಪ್ಪಿಕೊಂಡಿದ್ದಾರೆ. ಈ ವಿದ್ಯಮಾನ ಭಾರತ ಸೇರಿದಂತೆ ಅನೇಕ ದೇಶಗಳ ಆತಂಕಕ್ಕೆ ಕಾರಣವಾಗಿತ್ತು. ಇದಕ್ಕೆ ಮುಖ್ಯವಾದ ಕಾರಣಗಳಿವೆ.
ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯಿಸಿರುವ ತಾಲಿಬಾನ್, ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಇತರೆ ದೇಶಗಳ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಗತ್ತಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದೆ.
ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಜಾರಿದ ನಂತರ ಐಎಸ್‌ಐ ಮುಖ್ಯಸ್ಥ ಹಮೀದ್ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಯಾಕಂದರೆ, ಇದು ಜಗತ್ತಿನ ಯಾವುದೇ ದೇಶದ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ ಅಧಿಕೃತ ಭೇಟಿಯಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಪಾಕಿಸ್ತಾನವು ತಾಲಿಬಾನ್ ಉಗ್ರರಿಗೆ ಶಸ್ತಾಸ್ತ್ರ, ಹಣಕಾಸು ಸೇರಿದಂತೆ ಇತರೆ ಮಿಲಿಟರಿ ನೆರವು ನೀಡುತ್ತಿದೆ ಎಂದು ಹಲವು ಬಾರಿ ಈ ಹಿಂದಿನ ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿತ್ತು.
ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ, ಜಬೀವುಲ್ಲಾ ಮುಜಾಹಿದ್, ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಇತರೆ ದೇಶಗಳ ಮಧ್ಯ ಪ್ರವೇಶಕ್ಕೆ ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಕಳೆದ ಭಾನುವಾರ ಈ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್, ಕಾಬುಲ್ ಮತ್ತು ಇಸ್ಲಾಮಾಬಾದ್ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಪಾಕ್‌ನ ಗುಪ್ತಚರ ಇಲಾಖೆ ಮುಖ್ಯಸ್ಥರು ಆಗಮಿಸಿದ್ದರು ಎಂದು ಸಮಜಾಯಿಷಿ ನೀಡಿದ್ದನ್ನು ಗಮನಿಸಬಹುದು.
ಇದನ್ನೂ ಓದಿ: ಪಂಜಶೀರ್‌ನಲ್ಲಿ ವಿಜಯಘೋಷ ಮೊಳಗಿಸಿದ ತಾಲಿಬಾನ್; ಪಂಜಶೀರ್ ಹುಲಿಗಳಿಂದ ಕೊನೆಯುಸಿರಿನ ಹೋರಾಟದ ಪಣ