ಕಾಬೂಲ್ (ಅಫ್ಘಾನಿಸ್ತಾನ): ಕಂದಹಾರ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಗಳಿಗೆ ನುಗ್ಗಿದ ತಾಲಿಬಾನ್ ಉಗ್ರರು ಪ್ರಮುಖ ದಾಖಲೆಗಳಿಗಾಗಿ ಶೋಧ ನಡೆಸಿದ್ದಾರೆ ಹಾಗೂ ಕಚೇರಿಗಳ ಹೊರಗಡೆ ನಿಲ್ಲಿಸಿದ್ದ ಕಾರುಗಳನ್ನು ಹೊತ್ತೊಯ್ದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್‌ಗಳು ಕಾಬೂಲ್‌ನಲ್ಲಿ ಮನೆ-ಮನೆಗೆ ಶೋಧ ನಡೆಸುತ್ತಿದೆ. ರಾಷ್ಟ್ರೀಯ ಗುಪ್ತಚರ ಸಂಸ್ಥೆಯಾದ 'ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ' ಹಾಗೂ ಯುಎಸ್ ಮತ್ತು ನ್ಯಾಟೋ ಪಡೆಗಳೊಂದಿಗೆ ಕೆಲಸ ಮಾಡುತ್ತಿರುವ ಅಫ್ಘನ್‌ರನ್ನು ಪತ್ತೆ ಹಚ್ಚುತ್ತಿದೆ. ಇದೀಗ ಭಾರತೀಯ ಕಾನ್ಸುಲೇಟ್ ಕಚೇರಿಗಳಲ್ಲಿ ಶೋಧ ನಡೆಸುತ್ತಿವೆ. ಹೀಗೆ ಮಾಡುವ ಮೂಲಕ ತಾಲಿಬಾನ್ ನಾಯಕರು ಜಗತ್ತಿಗೆ ನೀಡಿರುವ ಆಶ್ವಾಸನೆಗಳಿಗೆ ವಿರುದ್ಧವಾಗಿ ಸಂಘಟನೆ ವರ್ತಿಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಆಫ್ಘನ್ನರ ವಲಸೆ ನಿಯಂತ್ರಿಸಲು ಧಾರ್ಮಿಕ ನಾಯಕರಿಗೆ ತಾಲಿಬಾನ್ ಮೊರೆ: ಏರ್ಪೋರ್ಟ್ಗೆ ಬಂದವರಿಗೆ ಥಳಿತ
ಭಾರತವು ಕಾಬೂಲ್‌ನಲ್ಲಿ ರಾಯಭಾರ ಕಚೇರಿಯ ಹೊರತಾಗಿ ಅಫ್ಘಾನಿಸ್ತಾನದಲ್ಲಿ ಒಟ್ಟು ನಾಲ್ಕು ಕಾನ್ಸುಲೇಟ್ ಕಚೇರಿಗಳನ್ನು ನಿರ್ವಹಿಸುತ್ತಿತ್ತು. ಕಂದಹಾರ್, ಹೆರಾತ್ ಮತ್ತು ಜಲಾಲಾಬಾದ್ ಬಿಟ್ಟು ಮಜರ್-ಇ-ಷರೀಫ್‌ನಲ್ಲಿದ್ದ ಕಾನ್ಸುಲೇಟ್ ಕಚೇರಿಯನ್ನು ತಾಲಿಬಾನ್ ದೇಶದ ಮೇಲೆ ಹಿಡಿತ ಸಾಧಿಸುವ ಕೆಲ ದಿನಗಳ ಮುಂದೆಯೇ ಮುಚ್ಚಲಾಗಿತ್ತು.
ಇನ್ನು ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯನ್ನು ಅಧಿಕೃತವಾಗಿ ಇನ್ನೂ ಮುಚ್ಚಿಲ್ಲ. ಆದರೆ ಅಲ್ಲಿದ್ದ ಭಾರತದ ಅಧಿಕಾರಿಗಳನ್ನು ದೇಶಕ್ಕೆ ಮರಳಿ ಕರೆತರಲಾಗುತ್ತಿದೆ. ಭಾರತೀಯ ಸಿಬ್ಬಂದಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಕತಾರ್ನಲ್ಲಿರುವ ತಾಲಿಬಾನ್ ಕಚೇರಿಯಿಂದ ಮಾಹಿತಿ ಬಂದಿವೆ ಎಂದು ಮೂಲಗಳು ತಿಳಿಸಿವೆ.